ಅಲೆವೂರು: ಕನ್ನಡ ಶಾಲೆಗಳು ನಿಧಾನವಾಗಿ ಹೇಗೆ ಅಂತ್ಯಗೊಳ್ಳುತ್ತಿವೆ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದಕ್ಕೆ ಸೆಡ್ಡು ಹೊಡೆದು ನಮ್ಮ ಊರಿನ ಶಾಲೆ ಮುಚ್ಚಬಾರದು ಅದು ನಮ್ಮೂರ ಹೆಮ್ಮೆ ಎಂದು ಕಳೆದ ಐದು ವರ್ಷಗಳಿಂದ ಶಾಲಾ ದತ್ತು ಸ್ವೀಕಾರ ಎನ್ನುವ ಕಾರ್ಯಕ್ರಮ ನಡೆಸಿ ಮುಚ್ಚುವ ಹಂತದಲ್ಲಿದ್ದ ಅಲೆವೂರು ಕರ್ವಾಲಿನ ಸರಕಾರಿ ಕನ್ನಡ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಅಲೆವೂರು ಕರ್ವಾಲಿನ ಹೆಮ್ಮೆಯ ಸಂಸ್ಥೆ ಶ್ರೀ ವಿಷ್ಣು ಸ್ನೇಹ ಬಳಗ ಇದೀಗ ಮತ್ತೊಂದು ನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಮ್ಮೂರ ಶಾಲಾ ಉತ್ಸವ:
ಕನ್ನಡ ರಾಜ್ಯೋತ್ಸವ ಅಂಗವಾಗಿ ಈ ಶಾಲಾ ಅಭಿಮಾನಿಗಳು ಊರವರು ಸೇರಿಕೊಂಡು ಇದೇ ಬರುವ ಅಕ್ಟೋಬರ್ 31ರ ಭಾನುವಾರ ಶಾಲೆಗೆ ದಾನಿಗಳ ಸಹಾಯದಿಂದ ಶ್ರಮದಾನದ ಮೂಲಕ ಸುಣ್ಣ ಬಣ್ಣ ಹೂದೋಟ ಪೌಷ್ಟಿಕ ತೋಟ ಸ್ವಚ್ಚತಾ ಕಾರ್ಯಕ್ರಮ ನಡೆಸಿ ಕೊರೊನಾದ ನಂತರದಲ್ಲಿ ಪ್ರಾರಂಭವಾಗುವ ಶಾಲೆಗೆ ಮತ್ತಷ್ಟು ಮೆರುಗು ನೀಡಲು ಯೋಜನೆ ತಯಾರಿಸಿದೆ. ಗ್ರಾಮಸ್ಥರೆಲ್ಲ ಉತ್ಸುಕತೆಯಿಂದ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಕ್ಷೇತ್ರ ಸಚಿವರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನಕರ್ ಬಾಬು, ಉದ್ಯಮಿಗಳಾದ ಕುಯಿಲಾಡಿ ಸುರೇಶ್ ನಾಯಕ್, ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಸುವರ್ಣ ಮತ್ತಿತರ ಗಣ್ಯರು ಆಗಮಿಸಲಿರುವರು.
ಕಳೆದ ಐದು ವರ್ಷಗಳಿಂದ ಶಾಲಾ ಮಕ್ಕಳಿಗೆ ಉಚಿತ ವಾಹನ ಸೌಕರ್ಯ, ಬ್ಯಾಗ್, ಪುಸ್ತಕ ಕೊಡೆ ಇತ್ಯಾದಿಗಳನ್ನು ನೀಡಿ ಶಾಲೆಗೆ ಬೇಕಾಗುವ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಗೆ ಸಾರ್ವಜನಿಕರು ಮತ್ತಷ್ಟು ಸಹಕಾರ ನೀಡಬೇಕೆಂದು ಶ್ರೀ ವಿಷ್ಣು ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಇವರು ವಿನಂತಿಸಿಕೊಂಡಿದ್ದಾರೆ.