ರಾಜ್ಯದಲ್ಲಿ ರಸ್ತೆ ಅಪಘಾತಗಳ ಆಘಾತಕಾರಿ ಏರಿಕೆ: ವರ್ಷಕ್ಕೆ 11 ಸಾವಿರಕ್ಕೂ ಹೆಚ್ಚು ಸಾವು!

ಬೆಂಗಳೂರು: ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಪ್ರತಿ ವರ್ಷ 11 ಸಾವಿರಕ್ಕೂ ಹೆಚ್ಚು ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಬಿಡುಗಡೆ ಮಾಡಿರುವ ಅಂಕಿಅಂಶಗಳು ರಸ್ತೆ ಸುರಕ್ಷತೆಯ ಗಂಭೀರ ಸ್ಥಿತಿಯನ್ನು ತೆರೆದಿಟ್ಟಿವೆ.

ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ 2021ರಲ್ಲಿ 31,434 ರಸ್ತೆ ಅಪಘಾತಗಳು ಸಂಭವಿಸಿದ್ದರೆ, 2025ರಲ್ಲಿ ಈ ಸಂಖ್ಯೆ 37,682ಕ್ಕೆ ಏರಿಕೆಯಾಗಿದೆ. ಇದು ಶೇ.20ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ 9,384ರಿಂದ 11,344ಕ್ಕೆ ಏರಿಕೆಯಾಗಿದ್ದು, ಶೇ.21ರಷ್ಟು ಹೆಚ್ಚಳ ದಾಖಲಾಗಿದೆ.

2023ರಲ್ಲಿ ರಾಜ್ಯದಲ್ಲಿ 38,466 ಅಪಘಾತಗಳು ಸಂಭವಿಸಿ 11,406 ಮಂದಿ ಮೃತಪಟ್ಟಿದ್ದರು. 2024ರಲ್ಲಿ 38,293 ಅಪಘಾತಗಳು ವರದಿಯಾಗಿದ್ದು, 11,496 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದು ಕಳೆದ ಐದು ವರ್ಷಗಳಲ್ಲೇ ದಾಖಲಾದ ಅತ್ಯಧಿಕ ಸಾವಿನ ಸಂಖ್ಯೆಯಾಗಿದೆ. 2025ರಲ್ಲಿ ಸಾವಿನ ಸಂಖ್ಯೆ ಸ್ವಲ್ಪ ಇಳಿಕೆಯಾಗಿ 11,344ಕ್ಕೆ ತಲುಪಿದ್ದರೂ, ಗಾಯಾಳುಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. 2021ರಲ್ಲಿ 37,934 ಮಂದಿ ಗಾಯಗೊಂಡಿದ್ದರೆ, 2025ರಲ್ಲಿ ಈ ಸಂಖ್ಯೆ 49,305ಕ್ಕೆ ಏರಿಕೆಯಾಗಿದೆ.

2026ರ ಮೊದಲ ಒಂಬತ್ತು ತಿಂಗಳ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 28,809 ಅಪಘಾತಗಳು ಸಂಭವಿಸಿದ್ದು, 8,048 ಮಂದಿ ಮೃತಪಟ್ಟಿದ್ದಾರೆ. 37,289 ಮಂದಿ ಗಾಯಗೊಂಡಿದ್ದಾರೆ. ಇನ್ನು 2021ರಿಂದ 2025ರ ಅವಧಿಯಲ್ಲಿ ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ 4,447 ಅಪಘಾತಗಳು ಸಂಭವಿಸಿದ್ದು, 847 ಮಂದಿ ಮೃತಪಟ್ಟಿದ್ದಾರೆ.

ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಅಪಘಾತಗಳು ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಕಾನೂನು ಜಾರಿ ಬಲಪಡಿಸುವುದರ ಜತೆಗೆ ರಾಜ್ಯಾದ್ಯಂತ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.

ರಾಜ್ಯ ಹೆದ್ದಾರಿಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಕ ಹಾದುಹೋಗುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಹಲವು ಸವಾಲುಗಳಿವೆ. ದ್ವಿಚಕ್ರ ವಾಹನಗಳು, ಟ್ರಾಕ್ಟರ್‌ಗಳು, ಬಸ್‌ಗಳು ಮತ್ತು ಪಾದಚಾರಿಗಳ ಸಂಚಾರದ ಜತೆಗೆ ಜಂಕ್ಷನ್‌ಗಳು, ತಿರುವುಗಳು ಹಾಗೂ ರಸ್ತೆ ಬದಿಯ ಚಟುವಟಿಕೆಗಳು ಅಪಘಾತದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ತಿಳಿಸಿದ್ದಾರೆ.

ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸರು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ಸಾರಿಗೆ ಇಲಾಖೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅತಿವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ತಪ್ಪು ದಿಕ್ಕಿನಲ್ಲಿ ವಾಹನ ಓಡಿಸುವುದು ಹಾಗೂ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಅಪಘಾತಗಳಿಗೆ ಕಾರಣವಾಗುವ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ನೆರವು ಒದಗಿಸಲು ಹಾಗೂ ಗಾಯಾಳುಗಳನ್ನು ಗೋಲ್ಡನ್ ಅವರ್‌ನಲ್ಲಿಯೇ ಆಸ್ಪತ್ರೆಗೆ ತಲುಪಿಸಲು ಪ್ರಮುಖ ರಾಜ್ಯ ಹೆದ್ದಾರಿ ಮಾರ್ಗಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಎಂ.ಎ. ಸಲೀಂ ತಿಳಿಸಿದ್ದಾರೆ.