“ಬಣ್ಣದ ಕನಸುಗಾರರ” ಬಗ್ಗೆ ಇಂದಿನಿಂದ udupixpress.com ನಲ್ಲಿ ಗಣಪತಿ ದಿವಾಣ ಬರಿತಾರೆ. “ಬಣ್ಣದ ಕನಸುಗಾರರು” ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ ಎನ್ನುವ ನಂಬಿಕೆ ಉಡುಪಿ XPRESS ತಂಡದ್ದು.ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.
ಪೆನ್ಸಿಲ್ ಸ್ಕೆಚ್ ಗಳು, ಬಣ್ಣದ ಚಿತ್ರಗಳನ್ನು ನೀವು ನೋಡಿರುತ್ತೀರಿ. ಆದರೀಗ ಚಿತ್ರಕಲೆ ಎಂಬ ವಿಷಯ ಅಷ್ಟಕ್ಕೇ ಉಳಿದಿಲ್ಲ. ಇಂದಿನ ಯುವಜನತೆ ಹೊಸ ಸಾಧ್ಯತೆಗಳನ್ನು ಹುಡುಕಿ, ಗೂಗಲ್, ಯೂಟ್ಯೂಬ್ ಮೂಲಕ ಮತ್ತೇನನ್ನೋ ಕಲಿತು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ತಾವೇ ಕಂಡುಕೊಳ್ಳುತ್ತಿದ್ದಾರೆ. ಅಂತಹದೊಂದು ಹೊಸ ಪ್ರಯತ್ನವೇ ಈ ಲೀಫ್ ಆರ್ಟ್!
ಎಲೆಯ ಮೇಲೆ ಚಿತ್ರ ಬರೆದು, ಅದನ್ನು ನಾಜೂಕಾಗಿ ಕೆತ್ತಿ, ಸುಂದರವಾದ ರೂಪ ಕೊಟ್ಟು, ನೋಡುಗರನ್ನು ಅಚ್ಚರಿ ಪಡಿಸಿದವರೇ ಲೀಫ್ ಆರ್ಟಿಸ್ಟ್ ಅಕ್ಷಯ್ ದೇವಾಡಿಗ. ಪ್ರಸ್ತುತ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಯಾಗಿರುವ ಇವರು ಮೊದಮೊದಲು ಕೇವಲ ಪೆನ್ಸಿಲ್ ಸ್ಕೆಚ್ ಗಳನ್ನು ಮಾಡುತ್ತಿದ್ದರು. ನಂತರ ತನ್ನ ಆಸಕ್ತಿಯ ಕ್ಷೇತ್ರವನ್ನು ಲೀಫ್ ಆರ್ಟ್ ಮೂಲಕ ವಿಸ್ತಾರಗೊಳಿಸಿದರು.
ಬಣ್ಣದ ಕನಸುಗಾರನ ಕತೆ:
ಇದು ಹೇಗೆ ಆರಂಭವಾಯಿತು ಎಂದು ಕೇಳಿದರೆ, ಸಾಮಾನ್ಯವಾಗಿ ಕಂಡು ಬರುವ ಅಶ್ವತ್ಥ ಎಲೆಯ ಗಣಪತಿಯ ಚಿತ್ರವೇ ಈ ಲೀಫ್ ಆರ್ಟ್ ಗೆ ಸ್ಪೂರ್ತಿ ಎಂದು ಹೇಳುತ್ತಾರೆ. ಅಶ್ವತ್ಥ ಎಲೆಯ ಬದಲು ದಾಸವಾಳದ ಎಲೆಯ ಮೂಲಕ ಮೊದಲ ಪ್ರಯತ್ನ ಮಾಡಿದೆ, ಆ ಚಿತ್ರ ಚೆನ್ನಾಗಿ ಮೂಡಿಬಂತು. ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತು. ನಂತರ ಇದರಲ್ಲಿ ಹೆಚ್ಚಿನ ಸಮಯ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ.
ಮೊದಮೊದಲು ಚಿತ್ರ ಬಿಡಿಸಲು ಬೇಕಾದ ಸಲಕರಣೆಗಳು ಇರಲಿಲ್ಲ. ಪಿನ್ ಮೂಲಕ ಎಲೆಯಲ್ಲಿ ಚಿತ್ರದ ಆಕಾರ ತರುತ್ತಿದ್ದೆ. ನಂತರ ಸರಿಯಾಗಿ ಕೆತ್ತಿ ಪೂರ್ಣ ರೂಪ ಕೊಡುತ್ತಿದ್ದೆ.
ಇತ್ತೀಚೆಗೆ ಸೂಕ್ಷ್ಮ ಚಿತ್ರಗಳನ್ನು ಬಿಡಿಸುವ ಸಂದರ್ಭ ಪೆನ್ಸಿಲ್ ಕೂಡ ಬಳಸಿಕೊಂಡಿದ್ದೇನೆ ಅಶ್ವತ್ಥ, ದಾಸವಾಳ ಮುಂತಾದ ಎಲೆಗಳಲ್ಲಿ ಚಿತ್ರ ಬಿಡಿಸಲು ಪ್ರಯತ್ನಿಸಿದ್ದೇನೆ. ಅಶ್ವತ್ಥ ಎಲೆ ಸೂಕ್ತವಾಗಿ ಸಹಕರಿಸುತ್ತದೆ, ಪುಸ್ತಕದ ಪುಟಗಳ ನಡುವೆ ಭದ್ರವಾಗಿಟ್ಟರೆ, ಚಿತ್ರವು ಹಾಗೇ ಉಳಿಯುತ್ತದೆ, ಏನೂ ಆಗುವುದಿಲ್ಲ ಎಂದು ಹೇಳುತ್ತಾರೆ.
ತನ್ನ ಕಲೆಯ ಸಾಮರ್ಥ್ಯ ಗಮನಿಸಿ ಆಪ್ತರೊಬ್ಬರು ಬ್ಲೇಡ್ ಸೆಟ್ ಉಡುಗೊರೆ ನೀಡಿದ್ದಾರೆ. ಹಾಗಾಗಿ ಎಲೆಗೆ ಹೊಸರೂಪ ಕೊಡುವುದು ಈಗ ಇನ್ನಷ್ಟು ಸುಲಭ ಮತ್ತು ಖುಷಿಯ ವಿಚಾರ ಎನ್ನುತ್ತಾರೆ ಅಕ್ಷಯ್.
ತಾನು ಇದನ್ನು ಎಲ್ಲಿಯೂ ನೋಡಿ, ಅಭ್ಯಾಸ ಮಾಡಿ ಕಲಿತದ್ದಲ್ಲ. ವಿವಿಧ ಸಾಧ್ಯತೆ ತಿಳಿದ ಬಳಿಕ ಚಿತ್ರಗಳನ್ನು ಮಾಡುತ್ತಲೇ ಅಭ್ಯಾಸ ಆಯ್ತು. ನಂತರ ಹೆಚ್ಚಿನ ಕಲಿಕೆ ಮತ್ತು ತಿಳುವಳಿಕೆಗಾಗಿ ಗೂಗಲ್, ಯೂಟ್ಯೂಬ್ ಗಳನ್ನು ನೋಡಿದ್ದೇನೆ. ಮೊದಲು ಹಬ್ಬ ಹರಿದಿನಗಳಲ್ಲಿ ಆಯಾ ದಿನಕ್ಕೆ ಸಂಬಂಧಿಸಿ ಚಿತ್ರ ತಯಾರಿಸುತ್ತಿದ್ದೆ. ನಂತರ ವಿಜಯ್ ರಾಘವೇಂದ್ರ, ರಾಜ್ ಬಿ. ಶೆಟ್ಟಿ, ರಿಷಭ್ ಶೆಟ್ಟಿ, ದರ್ಶನ್ ಮುಂತಾದವರ ಚಿತ್ರಗಳನ್ನು ಎಲೆಯ ಮೇಲೆ ತಂದೆ. ಅಲ್ಲಿಂದ ಪ್ರೋತ್ಸಾಹ ಮತ್ತಷ್ಟು ಹೆಚ್ಚಿತು. ಸಮಾಜಿಕ ಕಳಕಳಿಯ ಚಿತ್ರಗಳನ್ನೂ ಬಿಡಿಸು ಎಂದು ಗೆಳೆಯರು ಸಲಹೆ ನೀಡಿದರು. ಕೊರೊನಾ ಜಾಗೃತಿಗಾಗಿ, ಎಲೆಯ ಮೇಲೆ ಈ ಬಗ್ಗೆಯೂ ಚಿತ್ರ ಬಿಡಿಸಿದೆ. ಎಲ್ಲಾ ಹಿರಿಯರು, ಕಿರಿಯರು, ಗೆಳೆಯರ ಪ್ರೋತ್ಸಾಹ ಮತ್ತು ನನ್ನ ಆಸಕ್ತಿ ಹೀಗೆ ಮಾಡಲು ಪ್ರೇರೇಪಿಸಿದೆ. ಈ ವಿಭಾಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಆಸೆ ಇದೆ ಎನ್ನುವ ಅಕ್ಷಯ್ ಗೆ ಈ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಕಂಡು ಕೊಳ್ಳುವ ಕನಸಿದೆ. ಅವರ ಕನಸು ಈಡೇರಲಿ ಎನ್ನುವುದೇ ನಮ್ಮ ಹಾರೈಕೆ.ಇವರ ಸಂಪರ್ಕ :72598 48185