ಅಖಂಡ ರಷಿಯಾಕ್ಕೆ ಮುನ್ನುಡಿ ಬರೆದರೆ ವ್ಲಾದಿಮಿರ್ ಪುತಿನ್? ರಕ್ತಪಾತವಿಲ್ಲದೆ ಉಕ್ರೇನ್ ಆಯಿತು ಮೂರು ತುಂಡು!

ನವದೆಹಲಿ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವದ ಮಾಧ್ಯಮಗಳು ವ್ಲಾದಿಮಿರ್ ಪುತಿನ್ ಅನ್ನು ಒಬ್ಬ ಸರ್ವಾಧಿಕಾರಿ, ನಿರ್ದಯಿ ನಾಯಕನೆಂದು ಜರೆಯುತ್ತಿರಬಹುದು. ಆತನನ್ನು ಖಳನಾಯಕನಂತೆ ಬಿಂಬಿಸುತ್ತಿರಬಹುದು. ಆದರೆ ತನ್ನ ರಾಷ್ಟ್ರದ ಅಖಂಡತೆಯ ವಿಷಯ ಬಂದಾಗ ಎಂತಹ ಕಠೋರ ನಿರ್ಧಾವನ್ನು ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ, ತಾನು ಯಾರಿಗೂ ಜಗ್ಗುವುದಿಲ್ಲ ಎನ್ನುವುದನ್ನವರು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ. ತನ್ನ ‘ಅಖಂಡ ರಷಿಯಾ’ ನೀತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತಿನ್ ಮುಂದಡಿಯಿಟ್ಟು, ಮಗ್ಗುಲ ಮುಳ್ಳಾಗಿದ್ದ ಉಕ್ರೇನ್ ಅನ್ನು ಶಸ್ತ್ರಾಸ್ತ್ರಗಳ ಸಹಾಯವಿಲ್ಲದೆಯೆ ಮೂರು ತುಂಡುಗಳಾಗಿ ವಿಭಾಗಿಸಿದ್ದಾರೆ!

ರಷಿಯಾಕ್ಕೆ ಅಂಟಿಕೊಂಡಿರುವ ಪೂರ್ವ ಉಕ್ರೇನಿನ ದೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳನ್ನು ಉಕ್ರೇನಿನ ಕಪಿಮುಷ್ಟಿಯಿಂದ ಬಿಡಿಸಿ ಅವುಗಳಿಗೆ ಸಂಪೂರ್ಣ ಸ್ವಾಯತ್ತೆಯನ್ನು ಕೊಡುವ ಮೂಲಕ ಅಖಂಡ ರಷಿಯಾ ಕನಸನ್ನು ಸಾಕಾರಗೊಳಿಸುವತ್ತ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಇದರಿಂದ ಉಕ್ರೇನಿನ ಪ್ರತ್ಯೇಕತವಾದಿಗಳನ್ನು ಬಳಸಿಕೊಂಡು ರಷಿಯಾವನ್ನು ಅಸ್ಥಿರಗೊಳಿಸುವ ಶತ್ರುಗಳ ಷಡ್ಯಂತ್ರಕ್ಕೆ ಹಿನ್ನಡೆಯಾಗಿದೆ ಎಂದೇ ಹೇಳಬಹುದು.

ದೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳು ಉಕ್ರೇನ್ ನೊಳಗಿದ್ದರೂ ಇಲ್ಲಿನ ಜನರು ಸಾಂಸ್ಕೃತಿಕವಾಗಿ ಮತ್ತು ಭಾಷೆಯ ಆಧಾರದಲ್ಲಿ 80% ರಷಿಯನ್ನರೇ ಆಗಿದ್ದಾರೆ. 61 ಲಕ್ಷದಷ್ಟಿರುವ ಜನಸಂಖ್ಯೆಯಲ್ಲಿ 80% ಜನರು ರಷಿಯನ್ ಭಾಷೆಯನ್ನೇ ಮಾತನಾಡುತ್ತಾರೆ. ಈ ಸಾಂಸ್ಕೃತಿಕ ಏಕರೂಪತೆಯನ್ನು ಬಳಸಿಕೊಂಡು ಪುತಿನ್ ಉಕ್ರೇನ್ ಅನ್ನು ಮೂರು ತುಂಡುಗಳಾಗಿ ವಿಭಾಗಿಸಿ ಅಖಂಡ ರಷಿಯಾಕ್ಕೆ ಮುನ್ನುಡಿ ಬರೆದಿದ್ದಾರೆ ಎಂದೇ ಹೇಳಲಾಗುತ್ತಿದೆ.

ನ್ಯಾಟೋ ದೇಶಗಳು ರಷಿಯಾವನ್ನು ತಮ್ಮ ಶತ್ರು ಎಂದು ಪರಿಗಣಿಸುತ್ತವೆ ಅಂತಹ ದೇಶಗಳ ಕೂಟದಲ್ಲಿ ಉಕ್ರೇನ್ ಸೇರಿಕೊಳ್ಳುವುದು ರಷಿಯಾಕ್ಕೆ ಸುತರಾಂ ಇಷ್ಟವಿಲ್ಲ. ಇದರಿಂದ ಮುಂದೆ ರಷಿಯಾದ ಅಖಂಡತೆಗೆ ತೊಂದರೆ ಎಂದು ಕಂಡುಕೊಂಡ ಪುತಿನ್ ತಮ್ಮ ಶಾಂತಿ ಪಾಲನಾ ಸೈನ್ಯದ ತುಕುಡಿಯನ್ನು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳಲ್ಲಿ ನೇಮಿಸಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ.

ರಷಿಯಾದ ಈ ನಡೆಯ ಬಗ್ಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಅಸಮಾಧನಗಳು ವ್ಯಕ್ತವಾಗಿದ್ದರೂ ಪುತಿನ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ತಣ್ಣನೆ ಮಾಡಿ ಮುಗಿಸುತ್ತಿದ್ದಾರೆ. ತನ್ನ ದೇಶದ ಗಡಿ ಪ್ರದೇಶದ ಸುರಕ್ಷತೆಗಾಗಿ ಪುತಿನ್ ಎಂತಹ ನಿರ್ಧಾರ ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ರಷಿಯಾದ ಈ ಕೂಟನೀತಿಯ ನಡೆಯಿಂದ ಭಾರತವೂ ಕೆಲವು ಪಾಠಗಳನ್ನು ಕಲಿಯಬಹುದು. ದಶಕಗಳಿಂದ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನವನ್ನು ಖಂಡ ತುಂಡವಾಗಿಸಿ ‘ಅಖಂಡ ಭಾರತ’ಕ್ಕೆ ಅಡಿಪಾಯ ಹಾಕಬಹುದು. ಮಾಡುವ ಚಾಣಾಕ್ಷತನ ಮತ್ತು ಎದೆಗಾರಿಕೆ ಬೇಕಷ್ಟೆ.