ಕಾರ್ಕಳ: ವಿದ್ಯಾರ್ಥಿಗಳಲ್ಲಿ ಪರಿಜ್ಞಾನ ಮಾತ್ರವಲ್ಲ, ಅವರಲ್ಲಿನ ಜ್ಞಾನ ವಿಜ್ಞಾನ ಆಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಭಾವಂತರಿಗೆ ಪ್ರೋತ್ಸಾಹ ಅವಶ್ಯ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.
ಅವರು ಎ. 14ರಂದು ಅಜೆಕಾರು ಜ್ಞಾನಸುಧಾ ಪಿಯು ಕಾಲೇಜು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಸಾಧನೆ ತೋರಿ ಕೇವಲ ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗದೇ ಇಡೀ ಜಗತ್ತಿಗೆ ಜ್ಞಾನಸುಧಾದ ಸುಗಂಧವನ್ನು ಪಸರಿಸಿದ್ದಾರೆ. ಇದು ಕಾರ್ಕಳಕ್ಕೆ ಹೆಮ್ಮೆ ಸಂಸ್ಥೆ ಎಂದು ವೀರಪ್ಪ ಮೊಯ್ಲಿಯವರು ಶ್ಲಾಘಿಸಿದರು. ಸರಿಯಾದ ಅವಕಾಶ ಸಿಕ್ಕರೆ ಪ್ರತಿಯೊಬ್ಬ ಮಗುವೂ ಬುದ್ಧಿವಂತನಾಗಿ ಬೆಳೆಯಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ ಮೊಯ್ಲಿಯವರು ಈ ನಿಟ್ಟಿನಲ್ಲಿ ಸಮಾಜದಿಂದ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ ಎಂದರು. ಡಾ. ಸುಧಾಕರ್ ಶೆಟ್ಟಿ ಶಿಕ್ಷಣ ಬ್ರಹ್ಮನಾಗಿ ಗುರುತಿಸಿಕೊಂಡವರು. ಜ್ಞಾನಸುಧಾದಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಇದೀಗ ತನ್ನೂರಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮಹತ್ ಕಾರ್ಯಕ್ಕೆ ಮುಂದಾಗಿರುವುದು ಶ್ರೇಷ್ಠ ಕಾರ್ಯವೆಂದು ಮೊಯ್ಲಿ ಹೇಳಿದರು.

ಗಣಿತದಲ್ಲಿ ಸಂಶೋಧನೆ ಮಾಡುವ ಹಂಬಲ ವ್ಯಕ್ತಪಡಿಸಿದ ಜ್ಞಾನಸುಧಾದ ವಿದ್ಯಾರ್ಥಿಯನ್ನು ಪ್ರಶಂಸಿದ ಮೊಯ್ಲಿಯವರು, ಇಂಜಿನಿಯರಿಂಗ್‌ನಂತಹ ಸಾಂಪ್ರದಾಯಿಕ ವೃತ್ತಿಗಳ ಆಚೆಗೂ ಸಂಶೋಧನಾ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡುವಂತಹ ವೇದಿಕೆಯನ್ನು ಡಾ. ಸುಧಾಕರ್ ಶೆಟ್ಟಿ ಅವರು ತಮ್ಮ ಸಂಸ್ಥೆಗಳ ಮೂಲಕ ಸೃಷ್ಟಿಸಿದ್ದಾರೆ ಎಂದರು.
ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಶಿಕ್ಷಣದ ನಿಜವಾದ ಅರಿವಿರುವವರು ವಿದ್ಯಾಸಂಸ್ಥೆಗಳನ್ನು ಕಟ್ಟಿದಾಗ ಅಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಲು ಸಾಧ್ಯ. ಸ್ವತಃ ಆದರ್ಶ ಶಿಕ್ಷಕರಾಗಿರುವ ಡಾ. ಸುಧಾಕರ್ ಶೆಟ್ಟಿ ಅವರು ಈ ಭಾಗದಲ್ಲಿ ಸ್ವರ್ಗವೇ ಧರೆಗಿಳಿದಂತಹ ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಧಾಕರ್ ಶೆಟ್ಟಿ ಅವರು ಇಂದಿಗೂ ಬಿಡುವಿಲ್ಲದ ನಡುವೆಯೂ ಗಣಿತ ಪಾಠ ಮಾಡುವುದನ್ನು ಮುಂದುವರಿಸಿರುವುದು ಅವರ ವೃತ್ತಿ ನಿಷ್ಠೆಗೆ ಸಾಕ್ಷಿ. ನನ್ನ ಸಂಸ್ಥೆಯ ಶಿಕ್ಷಕರು ಬೇರೆಡೆ ಹೋಗಿ ಸಂಸ್ಥೆಗಳನ್ನು ಕಟ್ಟಿದರೂ ನಾನು ಮತ್ಸರ ಪಡುವುದಿಲ್ಲ. ಜೈನ ಕಾಶಿಯಲ್ಲಿ ಬೆಳೆದ ನಮಗೆ ಜೈನ ಧರ್ಮದ ಅಹಿಂಸಾ ತತ್ವ ಮತ್ತು ಉದಾತ್ತ ಸಿದ್ಧಾಂತಗಳೇ ಆದರ್ಶ. ಪರರ ಏಳ್ಗೆ ಕಂಡು ಅಸೂಯೆ ಪಡುವುದು ಅಥವಾ ಕೆಟ್ಟದ್ದನ್ನು ಯೋಚಿಸುವುದೇ ಪಾಪ ಎಂಬ ನಂಬಿಕೆ ನಮ್ಮದು. ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆಗಿಂತ ಸೇವೆಯೇ ಮುಖ್ಯವಾಗಬೇಕು. ಸುಧಾಕರ್ ಶೆಟ್ಟರು ಈ ದಾರಿಯಲ್ಲಿ ಸಾಗುತ್ತಾ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ ಎಂದವರು ಹರ್ಷ ವ್ಯಕ್ತಪಡಿಸಿದರು.

ಸಮಾಜಕ್ಕೆ ಜ್ಞಾನ, ಭಕ್ತಿ ನೀಡುತ್ತಿರುವ ಸುಧಾಕರ್ ಶೆಟ್ಟಿ ಕಾರ್ಯ ಶ್ಲಾಘನೀಯ
ತಂದೆ-ತಾಯಿಯನ್ನು ಗೌರವಿಸುವ ಗುಣ ಮನುಷ್ಯನನ್ನು ಆದರ್ಶಪ್ರಾಯನನ್ನಾಗಿ ಮಾಡುತ್ತದೆ. ಸಮಾಜಕ್ಕೆ ಜ್ಞಾನ ಮತ್ತು ಭಕ್ತಿ ಎರಡನ್ನೂ ನೀಡುತ್ತಿರುವ ಸುಧಾಕರ್ ಶೆಟ್ಟಿ ಕಾರ್ಯ ಶ್ಲಾಘನೀಯ. ಶೈಕ್ಷಣಿಕ ವಾತಾವರಣದ ಮೂಲಕ ಅವರು ಮಾಡುತ್ತಿರುವ ಸಮಾಜ ಸೇವೆ ಮುಂಬರುವ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಡಾ.ಮೋಹನ್ ಆಳ್ವರು ಹಾರೈಸಿದರು.

ಜ್ಞಾನಸುಧಾ ರಾಜ್ಯಕ್ಕೇ ಮಾದರಿ: ಸುನಿಲ್ ಶ್ಲಾಘನೆ
15 ವರ್ಷಗಳ ಹಿಂದೆ ಬಂಡೆಕಲ್ಲುಗಳಿಂದ ಕೂಡಿದ್ದ ಜಾಗವನ್ನು ಇಂದು ರಾಜ್ಯವೇ ಹೆಮ್ಮೆಪಡುವಂತಹ ‘ಗಣಿತ ನಗರ’ವಾಗಿ ಪರಿವರ್ತಿಸಿದ ಡಾ. ಸುಧಾಕರ್ ಶೆಟ್ಟಿಯವರ ಪರಿಶ್ರಮ ಅಪಾರ. ಶಿಕ್ಷಣದ ಬಗ್ಗೆ ಅವರಿಗಿರುವ ಕಾಳಜಿ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯಿಂದಾಗಿ ಇಂದು ಕಾರ್ಕಳದ ಜ್ಞಾನಸುಧಾ ಸಂಸ್ಥೆಯು ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದ ಅವರು ಕಾರ್ಕಳದ ಬೆಳವಣಿಗೆಗೆ ಸುಧಾಕರ್ ಶೆಟ್ಟರ ಕೊಡುಗೆ ಮಹತ್ತರವಾದುದು ಎಂದರು.
ಫಲಿತಾಂಶದಲ್ಲಿ ಮುಂಚೂಣಿ ಸುನಿಲ್ ಹರ್ಷ
ಜ್ಞಾನಸುಧಾ ಕಾಲೇಜಿನಲ್ಲಿ ಒಂದು ಸೀಟು ಕೊಡಿಸಬೇಕೆಂದು ರಾಜ್ಯದ ವಿವಿಧ ಜಿಲ್ಲೆಗಳ ರಾಜಕಾರಣಿಗಳು ಮತ್ತು ಪೋಷಕರು ನಿರಂತರ ನನಗೆ ಒತ್ತಡ ಹೇರುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳಲ್ಲಿ ರಾಜ್ಯದ ನಂಬರ್ ವನ್ ವಿದ್ಯಾಸಂಸ್ಥೆಗಳ ಪೈಕಿ ಕಾರ್ಕಳದ ಜ್ಞಾನಸುಧಾ ಮುಂಚೂಣಿಯಲ್ಲಿದೆ ಎಂಬುದು ನಮ್ಮ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಎಂದರು. ಇಂತಹ ಸಂಸ್ಥೆಗಳ ಪರಿಶ್ರಮದಿಂದಾಗಿಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳು ಕಳೆದ ಹತ್ತು ವರ್ಷಗಳಿಂದ ಅಗ್ರ ಸ್ಥಾನಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಸುನಿಲ್ ಕುಮಾರ್ ಶಿಕ್ಷಣ ಸಂಸ್ಥೆಗಳು ಬೆಳೆದಷ್ಟು ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ ಎಂಬುದಕ್ಕೆ ಪದ್ಮನಗರ ಮತ್ತು ಗಣಿತ ನಗರಗಳೇ ಸಾಕ್ಷಿ ಎಂದರು .
ಶೈಕ್ಷಣಿಕ ಕ್ರಾಂತಿಗೆ ಪೂರಕವಾಗಿ ನಿಂತಿರುವ ಡಾ. ಸುಧಾಕರ್ ಶೆಟ್ಟಿ ಅವರ ವಿದ್ಯಾಸಂಸ್ಥೆಗಳ ಬಗ್ಗೆ ಕೆಲವರು ವಿನಾಕಾರಣ ಟೀಕೆ ಮಾಡುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಸುನಿಲ್ ಕುಮಾರ್, ಸುಧಾಕರ್ ಶೆಟ್ಟರೊಂದಿಗಿನ ತಮ್ಮ ಸಿದ್ಧಾಂತ, ಬಾಂಧವ್ಯ, ಸ್ನೇಹದ ಸಂಬಂಧವನ್ನು ತಪ್ಪಾಗಿ ಅರ್ಥೈಸಿ ಸಂಸ್ಥೆಯಲ್ಲಿ ನನ್ನದೂ ಬಂಡವಾಳ ಇದೆ ಎಂದು ಹೇಳುತ್ತ ಬಂದಿರುತ್ತಾರೆ. ಇದೂ ಕೂಡ ನನಗೆ ಅತ್ಯಂತ ಖುಷಿಯ ವಿಚಾರವೇ. ಒಂದೂ ರೂ. ಬಂಡವಾಳ ಹಾಕದೇ ನಾನು ಕೂಡ ಜ್ಞಾನಸುಧಾ ಪಾಲುದಾರನಂತೆ ಬಿಂಬಿಸಿರುವುದು ಸಂತಸದ ಸಂಗತಿಯೇ ಆಗಿದೆ ಎಂದರು.
ಸಂಸ್ಥೆಗಳನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಟೀಕೆಗಳನ್ನು ಮಾಡುತ್ತಾ ಕಾಲಹರಣ ಮಾಡುವ ಬದಲು ಕಾರ್ಕಳದ ಬೆಳವಣಿಗೆಗೆ ಪೂರಕವಾಗಿ ಇಂತಹ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವತ್ತ ನಾವೆಲ್ಲರೂ ಗಮನಹರಿಸಬೇಕು ಎಂದು ಯಾರ ಹೆಸರು ಹೇಳದೆಯೇ ಸುನಿಲ್ ಕುಮಾರ್ ಅಭಿವೃದ್ಧಿ ವಿರೋಧಿಗಳಿಗೆ ಕುಟುಕಿದರು.
ಡಾ. ಸುಧಾಕರ್ ಶೆಟ್ಟರು ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯಯುತ ಪಾಠಗಳನ್ನು ಕಲಿಸುತ್ತಿದ್ದಾರೆ. ಇಂತಹ ಮೌಲ್ಯಾಧಾರಿತ ಶಿಕ್ಷಣದಿಂದಲೇ ರಾಜ್ಯದ ಶಿಕ್ಷಣ ಪ್ರೇಮಿಗಳು ಇಂದು ಜ್ಞಾನಸುಧಾ ಸಂಸ್ಥೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಶ್ಲಾಘಿಸಿದರು. ಒಂದು ಕಾಲದಲ್ಲಿ ಜ್ಞಾನಸುಧಾ ಸಂಸ್ಥೆ ಬಡವರಿಗೆ ಎಟುಕದ ಸಂಸ್ಥೆ ಎಂಬ ಟೀಕೆ ಹರಡಲಾಯಿತು. ಆದರೆ, ಇಂದು ಅಜೆಕಾರಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಪ್ರತಿ ವರ್ಷ ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಟೀಕಾಕಾರರಿಗೆ ಉತ್ತರವಾಗಿದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅಜೆಕಾರಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಅತ್ಯಂತ ಪುಣ್ಯದ ಕೆಲಸ: ವಿಶಾಲ್ ಹೆಗ್ಡೆ
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವಿಶಾಲ್ ಹೆಗ್ಡೆ ಮಾತನಾಡಿ, ಕ್ಯಾಂಪಸ್‌ಗೆ ಬಂದಾಗ ನನಗೆ ನಿಟ್ಟೆ ವಿದ್ಯಾ ಸಂಸ್ಥೆಯ ಆವರಣಕ್ಕೆ ಬಂದಷ್ಟೇ ಸಂತೋಷವಾಯಿತು. ನಮ್ಮ ಸಂಸ್ಥೆಯಂತೆ ಭವ್ಯವಾದ ಗಣಪತಿ ದೇವಸ್ಥಾನದ ಜೊತೆಗೆ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿದ್ದಾರೆ. ಅಜೆಕಾರಿನ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೇ ಉಚಿತ ಶಿಕ್ಷಣ ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಪುಣ್ಯದ ಕೆಲಸವೆಂದರು.
ನಾಗದೇವರು ನೆಲೆಸಿರುವ ಈ ಪುಣ್ಯಭೂಮಿಯಲ್ಲಿ ಸಂಪತ್ತಿಗೆ ಕೊರತೆಯಿಲ್ಲ, ಇಲ್ಲಿ ನಡೆಯುತ್ತಿರುವ ಪ್ರತಿ ಶೈಕ್ಷಣಿಕ ಕಾರ್ಯವನ್ನು ನಾಗದೇವರು ಹರಸುತ್ತಿದ್ದಾರೆ ಎಂದು ಮಹಾಗಣಪತಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಆಶಯ ವ್ಯಕ್ತಪಡಿಸಿದರು. ಅಜಿಕಾರಿನ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಊಟವನ್ನೂ ನೀಡಬೇಕೆಂಬ ಡಾ. ಸುಧಾಕರ್ ಶೆಟ್ಟಿ ಅವರ ಮಹತ್ವಾಕಾಂಕ್ಷೆಯ ಕನಸಿಗೆ ಮೆಚ್ಚುಗೆ ಸೂಚಿಸಿದ ಅವರು, ಈ ಸಮಾಜಮುಖಿ ಕಾರ್ಯಕ್ಕೆ ಬೆಂಬಲ ಇರಲಿದೆ ಎಂದು ಭರವಸೆಯಿತ್ತರು.
ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ, ಗುರುನಾರಾಯಣ ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಫೂಜಾರಿ ಮುದ್ರಾಡಿ, ಜೆಸಿಸಿ ಟಾಪರ್‌ಗಳಾದ ಕನಿಷ್ಕ್ ಅಮೀನ್, ಸೋಹನ್ ಗಿರಿರೆಡ್ಡಿ ಹಾಗೂ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ 595ಕ್ಕಿಂತ ಅಧಿಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಕಳ ರೋಟರಿ ಟಿಎಂಎ ಪೈ ಆಸ್ಪತ್ರೆಗೆ 10 ಲಕ್ಷ ರೂ. ಸಹಾಯಧನ
ಇದೇ ಸಂದರ್ಭದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಡಯಾಲಿಸಿಸ್ ಪೇಶಂಟ್‌ಗಳ ಚಿಕಿತ್ಸೆಗಾಗಿ ಕಾರ್ಕಳ ರೋಟರಿ ಟಿಎಂಎ ಪೈ ಆಸ್ಪತ್ರೆಗೆ 10 ಲಕ್ಷ ರೂ.ವನ್ನು ವೀರಪ್ಪ ಮೊಯ್ಲಿಯವರ ಮೂಲಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್ ಅವರಿಗೆ ಹಸ್ತಾಂತರಿಸಲಾಯಿತು.
ಡಾ. ಸುಧಾಕರ ಶೆಟ್ಟಿ ಸ್ವಾಗತಿಸಿದರು. ಯೋಗೀಶ್ ಕಿಣಿ ದೇಶಭಕ್ತಿ ಗೀತೆ ಹಾಡಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಬೋಳ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅನಿಲ್ ಕುಮಾರ್ ಜೈನ್ ವಂದಿಸಿದರು. ಸಂಸ್ಥೆ ಸಿಇಒ ದಿನೇಶ್ ಕೊಡವೂರು, ಪ್ರಾಂಶುಪಾಲರಾದ ಸಂತೋಷ್, ಗಣೇಶ್ ಶೆಟ್ಟಿ, ಶ್ರೀನಿಧಿ ಭಾಗವತ್, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲ ಸಾಹಿತ್ಯ ಸೇರಿದಂತೆ ಶಿಕ್ಷಕರ ವೃಂದದವರು ಸಹಕರಿಸಿದರು.




























