ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಉಡುಪಿಯ ಅಜಯ್ ಪುರುಷೋತ್ತಮ ಶೆಟ್ಟಿ

ಉಡುಪಿ, ನ.7: ಉಡುಪಿಯ ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ಅವರು ನವದೆಹಲಿಯ ೭ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಭೇಟಿಯಾಗಿ ಸಂವಾದ ನಡೆಸಿದರು. ಉಡುಪಿಯ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರಧಾನಿಯವರಿಗೆ ಸ್ಮರಣಿಕೆಯಾಗಿ ನೀಡಿದರು.
ಭೇಟಿಯ ಸಂದರ್ಭದಲ್ಲಿ ಭಾರತದ ನಾಗರಿಕ ಪರಂಪರೆ, ಆಧ್ಯಾತ್ಮಿಕತೆ, ತಾಂತ್ರಿಕ ಸ್ವಾವಲಂಬನೆ, ರಾಷ್ಟ್ರೀಯ ಸ್ಥಿರತೆ ಮತ್ತು ‘ವಿಕಸಿತ ಭಾರತ 2047’ರ ದೃಷ್ಟಿಕೋನದ ಕುರಿತು ವಿಸ್ತ್ರತ ಚರ್ಚೆ ನಡೆಯಿತು.
ದ್ವಾರಕೆ ಮತ್ತು ಉಡುಪಿ ನಡುವಿನ ಪವಿತ್ರ ನಂಟನ್ನು ಸ್ಮರಿಸಿದ ಮೋದಿಜಿ, ಉಡುಪಿ ಶ್ರೀಕೃಷ್ಣನು ತಮ್ಮ ಹೃದಯಕ್ಕೆ ಎಷ್ಟು ಹತ್ತಿರವಾಗಿದ್ದಾನೆ ಎಂಬುದನ್ನು ಪುನರುಚ್ಚರಿಸಿದರು ಹಾಗೂ ಉಡುಪಿಯನ್ನು ಆಧ್ಯಾತ್ಮಿಕ ಆನಂದದ ಪವಿತ್ರ ಕೇಂದ್ರವೆಂದು ಬಣ್ಣಿಸಿದರು.

ನವೆಂಬರ್ 2025ರಲ್ಲಿ ಪ್ರಧಾನ ಮಂತ್ರಿಯವರು ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪರ್ಯಾಯ ಶ್ರೀ ಪುತ್ತಿಗೆ ಮಠದ ಮಾರ್ಗದರ್ಶನದಲ್ಲಿ ಉಡುಪಿ ಶ್ರೀಕೃಷ್ಣ ಮಠವು ಆಯೋಜಿಸಿದ್ದ ಐತಿಹಾಸಿಕ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ತಾನು ಭಾಗವಹಿಸಿದ್ದನ್ನು ಅಜಯ್ ಶೆಟ್ಟಿ ನೆನಪಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಭಕ್ತರು ಒಟ್ಟಾಗಿ ಭಗವದ್ಗೀತೆಯ 15ನೇ ಅಧ್ಯಾಯವಾದ ‘ಪುರುಷೋತ್ತಮ ಯೋಗ’ವನ್ನು ಪರಿಸಿದ್ದರು. ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ನೀಡಿದ ಮಾತುಗಳು ಉಡುಪಿಯ ಜನರಿಗೆ ಇಂದಿಗೂ ಸ್ಪೂರ್ತಿಯ ಸೆಲೆಯಾಗಿವೆ ಎಂದು ಅಜಯ್ ಶೆಟ್ಟಿ ವಿವರಿಸಿದರು.
ಪ್ರಧಾನ ಮಂತ್ರಿಯವರ ‘ವಿಕಾಸವೂ, ಪರಂಪರೆಯೂ’ ಎಂಬ ದೃಷ್ಟಿಕೋನವು ತನ್ನ ಸಾರ್ವಜನಿಕ ಜೀವನಕ್ಕೆ ಎಷ್ಟು ಆಳವಾದ ಸ್ಪೂರ್ತಿಯನ್ನು ನೀಡಿದೆ ಎಂಬುದನ್ನು ವ್ಯಕ್ತಪಡಿಸಿದ ಅಜಯ್ ಶೆಟ್ಟಿ, ಭಾರತದ ಪ್ರಾಚೀನ ನಾಗರಿಕ ಸಾಧನೆಗಳ ಕುರಿತು ಚರ್ಚಿಸಿದರು.

ತಮ್ಮ ತವರು ಪಟ್ಟಣವಾದ ವಡ್‌ನಗರ ಮತ್ತು ಶತಮಾನಗಳ ಹಿಂದೆ ಆ ಪ್ರದೇಶಕ್ಕೆ ಭೇಟಿ ನೀಡಿದ್ದ ಚೀನೀ ಪ್ರವಾಸಿ ಹೂಯೆನ್ ತ್ಸಾಂಗ್ ನಡುವಿನ ಐತಿಹಾಸಿಕ ನಂಟನ್ನು ಮೋದಿಜಿ ಸ್ಮರಿಸಿದರು. ವಡ್‌ನಗರ ಮತ್ತು ಚೀನಾದ ಕ್ಸಿಯಾನ್ ನಗರಗಳೊಂದಿಗೆ ಹೂಯೆನ್ ತ್ಸಾಂಗ್ ಹೊಂದಿದ್ದ ಸಂಬಂಧ ಸೇರಿದಂತೆ, ಈ ಹಂಚಿಕೆಯ ಐತಿಹಾಸಿಕ ಪರಂಪರೆಯ ಕುರಿತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ತಾವು ನಡೆಸಿದ ಮಾತುಕತೆಗಳ ಬಗ್ಗೆ ಅವರು ವಿವರಿಸಿದರು.
ಲೋಥಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ ಕುರಿತಾಗಿಯೂ ಪ್ರಧಾನ ಮಂತ್ರಿಯವರು ಮಾತನಾಡಿದರು. ಇದು ಭಾರತದ ಪ್ರಾಚೀನ ನೌಕಾಯಾನ, ಹಡಗುಕಟ್ಟೆಗಳು ಮತ್ತು ಕಡಲ ವ್ಯಾಪಾರ ಜಾಲಗಳನ್ನು ಪ್ರದರ್ಶಿಸಲಿದ್ದು, ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ನಾಗರಿಕತೆಯು ಹೊಂದಿದ್ದ ಗಮನಾರ್ಹ ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಸಂಪರ್ಕಗಳನ್ನು ಎತ್ತಿ ತೋರಿಸಲಿದೆ. ನವದೆಹಲಿಯ ಪುರಾಣ ಕಿಲಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸುತ್ತಿರುವ ಪುರಾತತ್ತ್ವ ಕಾರ್ಯಗಳಿಗೆ, ವಿಶೇಷವಾಗಿ ಮೌರ್ಯರ ಕಾಲದ ಹಿಂದಿನ ಪ್ರಾಚೀನ ವಸಾಹತುಗಳೊಂದಿಗೆ ಸಂಬಂಧಿಸಿದ ಪೇಂಟೆಡ್ ಗೋ ವೇರ್ ನ ಆವಿಷ್ಕಾರಕ್ಕೆ ಅಜಯ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಕಾರ್ಯತಂತ್ರದ ಸ್ವಾತಂತ್ರ್ಯವನ್ನು ಕಾಪಾಡಲು ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳ ಅಗತ್ಯವನ್ನು ಅಜಯ್ ಶೆಟ್ಟಿ ಒತ್ತಿ ಹೇಳಿದರು. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಸಾಮಾಜಿಕ ಮಾಧ್ಯಮ ಅಲ್ಲಾರಿದಮ್ಗಳ ಪ್ರಭಾವ ಮತ್ತು ಮಾಹಿತಿಯ ಸಂಭಾವ್ಯ ಕುಶಲತೆಯ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು.

ಆತ್ಮನಿರ್ಭರ ಭಾರತದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿ ತಾಂತ್ರಿಕ ಮತ್ತು ಸಾಫ್ಟ್‌ವೇರ್ ಸ್ವಾವಲಂಬನೆ ಎರಡನ್ನೂ ಅನುಸರಿಸುವ ಮಹತ್ವವನ್ನು ಮೋದಿ ಒತ್ತಿ ಹೇಳಿದರು. ಅಜಯ್ ಶೆಟ್ಟಿ ಅವರು ಪ್ರಧಾನ ಮಂತ್ರಿಯವರಿಗೆ ‘ಬಿಜೆವೈಎಂ’ ನಿಯತಕಾಲಿಕದ ವಿಶೇಷ ಸಂಚಿಕೆ ‘ಸೇವಾ@25 – ಪ್ರಧಾನ್ ಸೇವಕ್, ವಿಕಸಿತ್ ಭಾರತ್’ ನ ಪ್ರತಿಯೊಂದನ್ನು ನೀಡಿದರು. ಇದರಲ್ಲಿ ಅವರು “ಕರ್ತವ್ಯ ಪೀಳಿಗೆ: 25 ವರ್ಷಗಳ ಸೇವೆಯ ಪರಂಪರೆ” ಎಂಬ ಶೀರ್ಷಿಕೆಯ ಲೇಖನವೊಂದನ್ನು ಬರೆದಿದ್ದರು. ಅಜಯ್ ಶೆಟ್ಟಿ ಅವರು ಪ್ರಧಾನಿಯವರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು ಮತ್ತು ಪ್ರಧಾನ ಮಂತ್ರಿಯವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.