ಏರ್ ಶೋ ಪಾರ್ಕಿಂಗ್ ಅಗ್ನಿ ಅವಘಡ : 300 ಕ್ಕೂ ಹೆಚ್ಚು ವಾಹನಗಳು ಭಸ್ಮ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2019ರ ನಾಲ್ಕನೇ ದಿನವಾದ ಶನಿವಾರ ಮೇಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದರು. ಈ ವೇಳೆ ಪಾರ್ಕಿಂಗ್‌ ಭಾಗದಲ್ಲಿ ಬೆಳೆದಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಆರಂಭದಲ್ಲಿ ಡೊಮೆಸ್ಟಿಕ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ದಟ್ಟವಾದ ಹೊಗೆ ಎದ್ದು ಆತಂಕ ಸೃಷ್ಟಿಯಾಗಿತ್ತು. ಅಲ್ಲದೆ, ಗೇಟ್‌ 5 ರ ಬಳಿಯಿದ್ದ ಪಾರ್ಕಿಂಗ್ ಬಳಿ ಹಲವು ವಾಹನಗಳಿಗೆ ಬೆಂಕಿ ಬಿದ್ದಿದೆ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.

ಇನ್ನು, ಈ ಘಟನೆಯಿಂದ ವಿಮಾನ ಹಾರಾಟಕ್ಕೆ ಕೆಲ ಕಾಲ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದರೆ, ಈಗಾಗಲೇ ಮೊದಲ ಅವಧಿಯ ವಿಮಾನ ಹಾರಾಟ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ. ಇನ್ನು, ಈ ವೇಳೆ ತೇಜಸ್ ಯುದ್ದ ವಿಮಾನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ವಿಮಾನ ಹಾರಾಟದಲ್ಲಿ ತೊಡಗಿದ್ದರು. ಸಿಂಧು ಸುಮಾರು 15 ನಿಮಿಷಗಳ ಕಾಲ ತೇಜಸ್ ವಿಮಾನ ಹಾರಾಟದಲ್ಲಿ ಪಾಲ್ಗೊಂಡರು.

ಏರ್ ಶೋ ಘಟನೆ ವೇಳೆ ವಾಹನಗಳಿಗೆ ಬೆಂಕಿ ತಗುಲಿದ ಅವಘಡದ ಬಗ್ಗೆ ಸಿಎಂ ಕುಮಾರಸ್ವಾಮಿ   ಸಹ ಟ್ವೀಟ್ ಮಾಡಿದ್ದಾರೆ. ಏರೋ ಇಂಡಿಯಾ ಶೋ ವೇಳೆ ಅಗ್ನಿ ಅವಘಡ ಸಂಬಂಧ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಜೀವಹಾನಿಯಾಗಿಲ್ಲ. ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿರುವ ಬಗ್ಗೆ ವರದಿಯಾಗಿದ್ದು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಅಗ್ನಿಶಾಮಕ ವರಿಷ್ಠರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.