ಚಂದ್ರನಿಂದ ಕಲ್ಲು-ಮಣ್ಣಿನ ಮಾದರಿ ತರುವ ಗುರಿ: ಚಂದ್ರಯಾನ-4ರತ್ತ ಇಸ್ರೋ ಚಿತ್ತ

ಪುಣೆ(ಮಹಾರಾಷ್ಟ್ರ): ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-4 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ.ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ, ಚಂದ್ರಯಾನ-4 ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ಚಂದ್ರಯಾನ-3ಯೋಜನೆಯ ಯಶಸ್ಸಿನೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಇದೀಗ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧವಾಗಿದೆ. ಅದುವೇ ಚಂದ್ರಯಾನ-4.

‘ಐದರಿಂದ 10 ವರ್ಷ ಸಮಯ’: ಚಂದ್ರಯಾನ-3 ಮಿಷನ್‌ ಜೀವಿತಾವಧಿಯು ಒಂದು ಚಂದ್ರನ ದಿನವಾಗಿದೆ. ಅಂದರೆ ಭೂಮಿಯ ಮೇಲಿನ 14 ದಿನಗಳಿಗೆ ಸಮ. ಚಂದ್ರಯಾನ-4ರ ಜೀವಿತಾವಧಿಯು ಏಳು ಚಂದ್ರ ದಿನಗಳು. ಇದು ಭೂಮಿಯ ಮೇಲಿನ ಸುಮಾರು 100 ದಿನಗಳಾಗುತ್ತದೆ. ಈ ಸಮಯದಲ್ಲಿ, ರೋವರ್‌ನ ಉಪಕರಣಗಳು ಬಂಡೆಗಳನ್ನು ಸಂಗ್ರಹಿಸುತ್ತವೆ. ಚಂದ್ರನ ಮೇಲೆ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಭೂಮಿಗೆ ತರುತ್ತದೆ. “ಈ ಯೋಜನೆಗೆ ಎರಡು ಉಡಾವಣಾ ವಾಹನಗಳನ್ನು ಸಿದ್ಧಪಡಿಸಬೇಕು. ಇದಕ್ಕೆ ಐದರಿಂದ ಹತ್ತು ವರ್ಷಗಳ ಸಮಯ ಬೇಕು” ಎಂದು ನೀಲೇಶ್ ದೇಸಾಯಿ ಮಾಹಿತಿ ನೀಡಿದರು. ಚಂದ್ರಯಾನ-3ರ ಯಶಸ್ಸಿನ ನಂತರ ಪ್ರಧಾನಿ ಮೋದಿ ಅವರು ದೊಡ್ಡ ಸವಾಲಿಗೆ ಸಿದ್ಧರಾಗುವಂತೆ ಇಸ್ರೋ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದಾರೆ. ಈ ಯೋಜನೆಗಾಗಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ JAXAನೊಂದಿಗೆ ಇಸ್ರೋ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಚಂದ್ರಯಾನ-3 ಯೋಜನೆಯ ಕುರಿತು..: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಈ ಮೂಲಕ ಭಾರತವು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಯಿತು. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ 14 ದಿನಗಳ ಕಾಲ ಚಂದ್ರನ ಬಗ್ಗೆ ಅಮೂಲ್ಯ ಮಾಹಿತಿ ರವಾನಿಸಿದೆ.ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಇಸ್ರೋ ಲುಪೆಕ್ಸ್ ಹೆಸರಿನಲ್ಲಿ ಚಂದ್ರನಿಂದ ಕಲ್ಲು ಮತ್ತು ಮಣ್ಣಿನ ಮಾದರಿ ತರುವ ಯೋಜನೆಯತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ. ಇದಕ್ಕಾಗಿ ಚಂದ್ರನ ಧ್ರುವ ಪರಿಶೋಧನೆ ಮಿಷನ್ ಸಿದ್ಧಪಡಿಸುತ್ತಿದ್ದೇವೆ. ಚಂದ್ರಯಾನ-4ರ ಮೂಲಕ 90 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಇಳಿಸಲಾಗುವುದು. ಇದರ ಜೊತೆಗೆ 350 ಕೆ.ಜಿ ತೂಕದ ರೋವರ್​ ಕಳುಹಿಸಲಾಗುವುದು. ಇದು ಚಂದ್ರನ ಮೇಲೆ ಒಂದು ಕಿಲೋಮೀಟರ್ ಸುತ್ತಲಿದೆ ಎಂದು ನಿಲೇಶ್ ದೇಸಾಯಿ ಹೇಳಿದರು.