ಆಗುಂಬೆ ಘಾಟಿಯಲ್ಲಿ ಒಂದು ತಿಂಗಳು ವಾಹನ ಸಂಚಾರ ಬಂದ್ !:ಮಾ.1 ರಿಂದ ತುರ್ತು ಕಾಮಗಾರಿ

ಉಡುಪಿ: ತುರ್ತು ಕಾಮಗಾರಿ ಪ್ರಯುಕ್ತ  ಆಗುಂಬೆ ಘಾಟಿ ವಾಹನ ಸಂಚಾರ ಮಾ.1 ರಿಂದ ಮಾ-31 ರವರೆಗೆ ಒಂದು ತಿಂಗಳ ಕಾಲ ಸ್ಥಗಿತಗೊಳ್ಳಲಿದ್ದು  ಆಗುಂಬೆ ಮೂಲಕ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮೊದಲಾದ ಕಡೆಗೆ ಸಾಗುವವರಿಗೆ  ರಸ್ತೆ ಬಂದ್ ಬಿಸಿ ತಟ್ಟಲಿದೆ. 
ತುರ್ತು ಕಾಮಗಾರಿ:
 ಆಗುಂಬೆ ಘಾಟಿಯಲ್ಲಿ  ಮಣ್ಣು ಕುಸಿತ, ಬಂಡೆಗಳ ಕುಸಿತ ಆಗಾಗ ನಡೆಯುತ್ತಲೇ ಇರುವ ಕಾರಣ ಆಗುಂಬೆಯ ಕೆಲವೊಂದು ತಿರುವುಗಳಲ್ಲಿ ವಾಹನ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ. ಆ ಸಲುವಾಗಿ 14ನೇ ತಿರುವಿನಿಂದ 7ನೇ ತಿರುವಿನವರೆಗೆ ಹಾಗೂ 7ನೇ ತಿರುವಿನಿಂದ 1ನೇ ತಿರುವಿನ  ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ರಸ್ತೆ ದುರಸ್ತಿ ತುರ್ತು ಕಾಮಗಾರಿ ನಡೆಯಲಿದೆ.  ಹಾಗಾಗಿ ಮಾ. 1 ರಿಂದ 31 ರವರೆಗೆ ಒಂದು ತಿಂಗಳ ಕಾಲ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗ ಯಾವುದು?
ಬದಲಿ ಮಾರ್ಗವಾಗಿ ತೀರ್ಥಹಳ್ಳಿ- ಮಾಸ್ತೀಕಟ್ಟೆ- ಕುಂದಾಪುರ-ಭಾಳೇಬರೆ ಘಾಟಿ(ಹುಲಿಕಲ್ ಘಾಟಿ) ಹಾಗೂ ತೀರ್ಥಹಳ್ಳಿ- ಶೃಂಗೇರಿ-ಕಾರ್ಕಳ ಘಾಟಿ ಮೂಲಕ ಸಂಚರಿಸಲು ಮಿನಿಬಸ್ಸ್ ಸೇವೆ ಒದಗಿಸಲಾಗುವುದಾಗಿ ತಿಳಿಸಲಾಗಿದೆ. ಸಾರ್ವಜನಿಕರು, ಬಸ್-ವಾಹನ ಲಾರಿ ಮಾಲೀಕರು ಸಹಕರಿಸಲು  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎ ದಯಾನಂದ ಅವರು  ಸಾರ್ಮವಜನಿಕರಲ್ಲಿ ಮಾಡಿಕೊಂಡಿದ್ದಾರೆ. ಕೆಲವು ವಷರ್ಗಳ ಹಿಂದೆ ತುರ್ತು ಕಾಮಗಾರಿಯಿಂದಾಗಿ ಆಗುಂಬೆ ಸಂಚಾರ ಕೆಲವು ಸಮಯ ಸ್ಥಗಿತಗೊಂಡಿತ್ತು.ಇದರಿಂದಾಗಿ ಮಲೆನಾಡಿನ ಕಡೆಗೆ ಸಾಗುವ ವಾಹನ ಸವಾರರು, ಸಾರ್ವಜನಿಕರು ತ್ರಸ ಅನುಭವಿಸಿದ್ದರು. ಆದರೆ ಆಗುಂಬೆಯ ತಿರುವುಗಳು ಅಪಾಯಕಾರಿಯಾಗಿದೆ ಎನ್ನುವ ಎಚ್ಚರಿಕೆ ಸಾರ್ವಜನಿಕರಿಂದ ನಿರಂತರವಾಗಿ ಬರುತ್ತಲೇ ಇತ್ತು. ಇದೀಗ ಈ ತುರ್ತು ಕಾಮಗಾರಿ ನಡೆಯುತ್ತಿರುವುದು ಸಾರ್ವಜನಿಕರ ದೃಷ್ಟಿಯಿಂದ ಅನುಕೂಲಕರವಾಗಿದೆ.