ಮೂಡಬಿದ್ರೆ: ಮೂಡುಬಿದಿರೆ ಸಮೀಪದ ಸೋನ್ಸ್ ಫಾರಂನ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನಿ ಡಾ.ಎಲ್.ಸಿ.ಸೋನ್ಸ್ ಬುಧವಾರದಂದು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಅವರು ತಮ್ಮ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಮತ್ತು ಸಹೋದರ ಐ ವಿ ಸೋನ್ಸ್ ಅವರನ್ನು ಅಗಲಿದ್ದಾರೆ.
ಡಾ ಸೋನ್ಸ್ 1966 ರಲ್ಲಿ ಮೊಂಟಾನಾ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪಡೆದಿದ್ದರು. ಸುಮಾರು ನಾಲ್ಕೈದು ದಶಕಗಳ ಕಾಲದಿಂದಲೂ ಮೂಡಬಿದ್ರೆಯ ತಮ್ಮ ಸ್ವಂತ ಜಮೀನಿನಲ್ಲಿ ಹಲವು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆದು ಪ್ರಖ್ಯಾತಿ ಹೊಂದಿದ್ದರು. ಹಣ್ಣುಗಳಲ್ಲಿ ರಂಬುಟಾನ್, ಡುರಿಯನ್, ಲ್ಯಾಂಗ್‌ಸಾಟ್, ಮಲಯ ಸೇಬು, ಎಗ್ ಫ್ರೂಟ್ (ದಕ್ಷಿಣ ಅಮೇರಿಕಾ), ಡೀಸೆಲ್ ಮರ (ಅಮೆಜಾನ್ ಕಾಡುಗಳು), ಅಬಿಯು (ಆಸ್ಟ್ರೇಲಿಯಾ) ಮತ್ತು ಜಬೊಟಿಕಾಬಾ (ದಕ್ಷಿಣ ಅಮೇರಿಕಾ) ಮತ್ತು ಮಕಾಡಾಮಿಯಾ ಕಾಯಿ, ಅನಾನಸ್, ಮಾವು ಮತ್ತು ವಿವಿಧ ರೀತಿಯ ಬಿದಿರಿನ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ಸಾರ್ಥಕ್ಯ ಕಂಡಿದ್ದರು.
ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಸಲಹೆಗಾರರಾಗಿ ಹಾಗೂ ಶ್ರೀ ಮಹಾವೀರ ವಿದ್ಯಾವರ್ಧಕ ಸಂಘ, ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ, ರೋಟರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.