ರೊನಾಲ್ಡೊ, ಮೆಸ್ಸಿ ಪಕ್ಕದಲ್ಲಿ ಭಾರತದ ಸುನಿಲ್ ಛೇತ್ರಿ: ಅಂತಾರಾಷ್ಟ್ರೀಯ ಗೋಲ್ ಗಳಿಕೆಯಲ್ಲಿ ಮೂರನೆ ಸ್ಥಾನ ಪಡೆದ ನಾಯಕ

Image Courtesy: FIFA

ರತೀಯರೆಲ್ಲರೂ ಹೆಮ್ಮೆ ಪಡುವ ಕ್ಷಣವೊಂದು ಫುಟ್ ಬಾಲ್ ಕ್ರೀಡೆಯಿಂದ ಒದಗಿ ಬಂದಿದೆ. ಫುಟ್ ಬಾಲ್ ನ ದಂತ ಕಥೆಗಳೆಂದೆ ಪರಿಗಣಿತರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಪಕ್ಕದಲ್ಲಿ ಭಾರತದ ಆಟಗಾರ ಸುನಿಲ್ ಛೇತ್ರಿ ಇರುವ ಫೋಟೋವೊಂದನ್ನು ಫಿಫಾ(FIFA) ಹಂಚಿಕೊಂಡಿರುವುದೆ ಈ ಖುಷಿಗೆ ಕಾರಣ. ಸಕ್ರಿಯ ಅಂತಾರಾಷ್ಟ್ರೀಯ ಗೋಲ್‌ ಗಳಿಕೆಯ ಪಟ್ಟಿಯಲ್ಲಿ ರೊನಾಲ್ಡೊ ಮತ್ತು ಮೆಸ್ಸಿ ಬಳಿಕದ ಮೂರನೇ ಸ್ಥಾನ ಭಾರತದ ಆಟಗಾರ ಛೇತ್ರಿ ಪಾಲಾಗಿದೆ. ವಿಶ್ವದ ಟಾಪ್ ಮೂರು ಗೋಲ್ ಗಳಿಕೆದಾರರಲ್ಲಿ ಒಬ್ಬರು ಭಾರತೀಯರಾಗಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಷಯ.

ಕ್ರಿಸ್ಟಿಯಾನೊ ರೊನಾಲ್ಡೊ 191 ಪಂದ್ಯಗಳಲ್ಲಿ 117 ಗೋಲುಗಳೊಂದಿಗೆ ಪುರುಷರ ಫುಟ್‌ಬಾಲ್‌ನಲ್ಲಿ ಅಗ್ರ ಅಂತರರಾಷ್ಟ್ರೀಯ ಗೋಲ್ ಗಳಿಕೆಯ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ 164 ಪಂದ್ಯಗಳಲ್ಲಿ 90 ಗೋಲುಗಳೊಂದಿಗೆ 2 ನೇ ಸ್ಥಾನವನ್ನು ಪಡೆದಿದ್ದಾರೆ. ಭಾರತದ ಫುಟ್ ಬಾಲ್ ತಂಡದ ನಾಯಕ ಸುನಿಲ್ ಛೇ 131 ಪಂದ್ಯಗಳಲ್ಲಿ 84 ಗೋಲುಗಳೊಂದಿಗೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಮೆಸ್ಸಿ ಮತ್ತು ರೊನಾಲ್ಡೊ ಜೊತೆಗೆ ಛೇತ್ರಿಯನ್ನು ಒಳಗೊಂಡಿರುವ ಫಿಫಾ ವಿಶ್ವಕಪ್ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಕಂಡು ಭಾರತೀಯ ಫುಟ್ ಬಾಲ್ ಪ್ರೇಮಿಗಳು ಆನಂದತುಂದಿಲರಾಗಿದ್ದಾರೆ. ಜಗತ್ತಿನ ಅತ್ಯಂತ ಪ್ರಸಿದ್ದ ಕ್ರೀಡೆಯಾದ ಫುಟ್ ಬಾಲ್ ಗೋಲ್ ಗಳಿಕೆಯ ಅಗ್ರಾಣಿ ಆಟಗಾರರ ಪಕ್ಕದಲ್ಲಿ ದೇಶದ ಫುಟ್ ಬಾಲ್ ತಂಡದ ನಾಯಕ ಸ್ಥಾನ ಗಳಿಸಿರುವುದು ಅತ್ಯಪೂರ್ವ ಸಾಧನೆ. ಛೇತ್ರಿಯವರ ಈ ಸಾಧನೆಗಾಗಿ ಪ್ರಧಾನಿ ಮೋದಿಯಾಗಿ ದೇಶವೇ ಅವರನ್ನು ಅಭಿನಂದಿಸುತ್ತಿದೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಯುವಕರು ಫುಟ್ ಬಾಲ್ ಕ್ರೀಡೆಯತ್ತ ಹೆಚ್ಚು ಒಲವು ತೋರಲಿ ಎಂದು ಆಶಿಸುತ್ತಿದೆ.