ಬೆಂಗಳೂರು: ಸುಧಾರಿತ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪಿಸಲು ಭಾರತದ ಯುರೋಫಿನ್ಸ್ ಗ್ರೂಪ್ ಆಫ್ ಕಂಪನಿಯು ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಪ್ರಯೋಗಾಲಯವು ಇತ್ತೀಚಿನ ಉಪಕರಣಗಳನ್ನು ಹೊಂದಿದ್ದು, ರಸಾಯನಶಾಸ್ತ್ರ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡುತ್ತದೆ. ಯುರೋಫಿನ್ಸ್ ಅಡ್ವಿನಸ್, ಯೂರೋಫಿನ್ಸ್ ಅನಾಲಿಟಿಕಲ್ ಸರ್ವಿಸಸ್ ಮತ್ತು ಯೂರೋಫಿನ್ಸ್ ಅಮರ್ ಇಮ್ಯುನೊಡಯಾಗ್ನೋಸ್ಟಿಕ್ಸ್ನ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ಈ ಉಪಕ್ರಮವು ಮಾನವ ಬಂಡವಾಳವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದ ಆತ್ಮನಿರ್ಭರ ಕಾರ್ಯಕ್ರಮವನ್ನು ಬೆಂಬಲಿಸುವ ಯುರೋಫಿನ್ಸ್ ಸಂಸ್ಥೆಯ ಬದ್ಧತೆಯ ಒಂದು ಭಾಗವಾಗಿದೆ.
ಲ್ಯಾಬ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾರತದ ಯೂರೋಫಿನ್ಸ್ ಗ್ರೂಪ್ ಆಫ್ ಕಂಪನಿಗಳ ಪ್ರಾದೇಶಿಕ ನಿರ್ದೇಶಕ ನೀರಜ್ ಗರ್ಗ್, “ಔಷಧ ವಲಯದ ಕಸ್ಟಮ್ ಸಂಶೋಧನೆ, ಅಭಿವೃದ್ಧಿ ಸೇವೆಗಳಲ್ಲಿ ಹಾಗೂ ಭಾರತದಲ್ಲಿ ಆಹಾರ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಯುರೋಫಿನ್ಸ್, ರಸಾಯನಶಾಸ್ತ್ರ ವಿದ್ಯಾರ್ಥಿಗಳ ತರಬೇತಿ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ದೇಶದಲ್ಲಿ ಪರೀಕ್ಷೆ ಮತ್ತು ಆರ್&ಡಿ ಮೂಲಸೌಕರ್ಯವನ್ನು ವಿಸ್ತರಿಸಲು ಇದು ಪ್ರಮುಖ ಉಪಕ್ರಮವಾಗಿದೆ” ಎಂದರು.
ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯದ ಉಪಕುಲಪತಿ ರೆ| ವಿಕ್ಟರ್ ಲೋಬೊ ಎಸ್‌ಜೆ ಮಾತನಾಡಿ, “ಭಾರತದ ಯುರೋಫಿನ್ಸ್ ಕಂಪನಿ ಹಾಗೂ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ನಡುವಿನ ಈ ಬಹು-ವರ್ಷದ ಪಾಲುದಾರಿಕೆಯಿಂದ ನಾವು ತುಂಬಾ ಉತ್ಸುಕರಾಗಿದ್ದೇವೆ, ಏಕೆಂದರೆ ಸಾಮಾನ್ಯವಾಗಿ ಯುರೋಫಿನ್ಸ್ ನಂತಹ ಕಂಪನಿಗಳ ಉನ್ನತ-ಮಟ್ಟದ ವಾಣಿಜ್ಯ ಪ್ರಯೋಗಾಲಯಗಳಲ್ಲಿ ಮಾತ್ರ ಲಭ್ಯವಿರುವ ಸುಧಾರಿತ ಸಾಧನಗಳನ್ನು ಕಲಿಯಲು ನಮ್ಮ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ” ಎಂದರು.
ಭಾರತದಲ್ಲಿನ ಯೂರೋಫಿನ್ಸ್ ಕಂಪನಿಯು ದೇಶದಲ್ಲಿ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಕಂಪನಿಗಳ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ಈ ಅನುದಾನವು ಆರ್&ಡಿ ಹಾಗೂ ಪರೀಕ್ಷೆಯನ್ನು ಬೆಂಬಲಿಸಲು ಉದ್ಯಮ-ಸಿದ್ಧ, ಹೆಚ್ಚು ತರಬೇತಿ ಪಡೆದ ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರಜ್ಞರನ್ನು ಅಭಿವೃದ್ಧಿಪಡಿಸಲು ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಯೂರೋಫಿನ್ಸ್ ಅಡ್ವಿನಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮಲಿಕ್ ಹಾಗೂ ಯುರೋಫಿನ್ಸ್ ವಿಶ್ಲೇಷಣಾತ್ಮಕ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಜೈಮಿನಿ ಅವರೊಂದಿಗೆ ಪ್ರೊ. ಚಾನ್ಸಲರ್ ರೆ| ಸ್ವೀಬರ್ಟ್ ಡಿಸಿಲ್ವಾ ಎಸ್‌ಜೆ ಮತ್ತು ಬೆಂಗಳೂರು ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ (ಬಿಜೆಇಎಸ್) ಕಾರ್ಯದರ್ಶಿ ರೆ| ಜಾಯ್ ರೊಡ್ರಿಗಸ್ ಎಸ್‌ಜೆ ಉಪಸ್ಥಿತರಿದ್ದರು.
ಯೂರೋಫಿನ್ಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಅರುಣ್ ಕುಮಾರ್ ಅವರ ಮೂಲಕ ಎಸ್‌ಜೆಯುನಲ್ಲಿ ಲ್ಯಾಬ್ ಅನ್ನು ಹೇಗೆ ಸ್ಥಾಪಿಸಲಾಯಿತು ಎಂಬುದರ ಕುರಿತು ನಿರ್ದೇಶಕ ರೆ| ಕ್ಸೇವಿಯರ್ ಎಸ್‌ಜೆ ವಿವರಿಸಿದರು. ರೆ| ಸ್ವೀಬರ್ಟ್ ಪ್ರಯೋಗಾಲಯವನ್ನು ಆಶೀರ್ವದಿಸಿದ ನಂತರ ಅಧ್ಯಾಪಕರು ಹಾಗೂ ರಸಾಯನಶಾಸ್ತ್ರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹೊಸದಾಗಿ ಸ್ಥಾಪಿಸಲಾದ ಲ್ಯಾಬ್‌ನಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು.
ಯುರೋಫಿನ್ಸ್ ಬಗ್ಗೆ: ಯುರೋಫಿನ್ಸ್ ಸೈಂಟಿಫಿಕ್ ತನ್ನ ಅಂಗಸಂಸ್ಥೆಗಳ ಮೂಲಕ ಆಹಾರ, ಪರಿಸರ, ಔಷಧೀಯ ಮತ್ತು ಸೌಂದರ್ಯವರ್ಧಕ ಉತ್ಪನ್ನ ಪರೀಕ್ಷೆ, ಡಿಸ್ಕವರಿ ಫಾರ್ಮಕಾಲಜಿ, ಫೋರೆನ್ಸಿಕ್, ಸುಧಾರಿತ ವಸ್ತು ವಿಜ್ಞಾನಗಳು ಮತ್ತು ಔಷಧೀಯ ಮತ್ತು ಕೃಷಿ ವಿಜ್ಞಾನ ಒಪ್ಪಂದ ಸಂಶೋಧನಾ ಸೇವೆಗಳಲ್ಲಿ ವಿಶ್ವ ನಾಯಕರಾಗಿದ್ದಾರೆ. ಭಾರತದಲ್ಲಿ, ಯುರೋಫಿನ್ಸ್ ಗುಂಪಿನ ಕಂಪನಿಗಳು ಫಾರ್ಮಾಸ್ಯುಟಿಕಲ್ ಮತ್ತು ಅಗ್ರೋಸೈನ್ಸ್ ಆರ್&ಡಿ ಮೌಲ್ಯ ಸರಣಿ, ಆಹಾರ ಮತ್ತು ಪರಿಸರ ಪರೀಕ್ಷೆ, ಜಿನೋಮಿಕ್ಸ್ ಸೇವೆಗಳು ಮತ್ತು ಗ್ರಾಹಕ ಉತ್ಪನ್ನ ಪರೀಕ್ಷೆಯಾದ್ಯಂತ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತವೆ. ಯುರೋಫಿನ್ಸ್ ಗ್ರೂಪ್ ಕಂಪನಿಗಳು ಭಾರತದಲ್ಲಿ ಸುಮಾರು 4000 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, 15 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಭಾರತದಲ್ಲಿ ಮಾರಾಟವಾಗುವ ಆಹಾರ ಮತ್ತು ಔಷಧೀಯ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಜಾಗತಿಕವಾಗಿ ಉತ್ಪನ್ನಗಳನ್ನು ತೆಗೆದುಕೊಳ್ಳುವ ಅನೇಕ ಭಾರತೀಯ ಕಂಪನಿಗಳಿಗೆ ಭಾರತದಲ್ಲಿ ಯೂರೋಫಿನ್ಸ್ ಪ್ರಮುಖ ಪಾಲುದಾರರಾಗಿದ್ದಾರೆ.
ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಬಗ್ಗೆ: ಕರ್ನಾಟಕ ಸರ್ಕಾರವು 23 ನೇ ಫೆಬ್ರವರಿ 2021ರಂದು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಮಸೂದೆಯನ್ನು ಅಂಗೀಕರಿಸಿ, 140 ವರ್ಷಗಳಷ್ಟು ಹಳೆಯದಾದ ಸೈಂಟ್ ಜೋಸೆಫ್ಸ್ ಕಾಲೇಜು (ಸ್ವಾಯತ್ತ) ವಿಶ್ವವಿದ್ಯಾಲಯವಾಗಲು ದಾರಿ ಮಾಡಿಕೊಟ್ಟಿತು. ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯವು ಪಿಪಿಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ದೇಶದಲ್ಲಿ ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದೆ. ಹೊಸ ವಿಶ್ವವಿದ್ಯಾನಿಲಯವು ವೈಜ್ಞಾನಿಕ ಸಂಶೋಧನೆ/ಉತ್ಸಾಹ, ಗುಣಮಟ್ಟದ ಶಿಕ್ಷಣ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವಲ್ಲಿ ನಾಯಕನಾಗುವ ಗುರಿಯನ್ನು ಹೊಂದಿದೆ ಹಾಗೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣದಲ್ಲಿ ಸಮಾನತೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದು ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಚೇತನರ ಸೇರ್ಪಡೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ.