ಗಂಗೊಳ್ಳಿ: ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಬಾಡಿಗೆ ಮಾಡುತ್ತಿದ್ದ ಆಟೊಗಳ ವಶ

ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಉಡುಪಿ ಜಿಲ್ಲೆಯಲ್ಲಿ ಆಟೋ ರಿಕ್ಷಾ ಸಂಚಾರವನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ರಸ್ತೆಗಿಳಿದು ಬಾಡಿಗೆ ಮಾಡುತ್ತಿದ್ದ ಆಟೋ ರಿಕ್ಷಾಗಳನ್ನು ಸುಮಾರು 20 ಆಟೋ ರಿಕ್ಷಾಗಳನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ಗಂಗೊಳ್ಳಿಯಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳಿಂದ ಆಟೋ ರಿಕ್ಷಾಗಳು ಬಾಡಿಗೆಯಲ್ಲಿ ತೊಡಗಿಕೊಂಡಿದ್ದು, ದಿನದಿಂದ ದಿನಕ್ಕೆ ಆಟೋ ರಿಕ್ಷಾ ಸಂಚಾರ ಹೆಚ್ಚಾಗುತ್ತಿತ್ತು. ಜಿಲ್ಲಾಡಳಿತ ಮತ್ತು ಪೊಲೀಸರ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ರಸ್ತೆಗಳಿದು ಬಾಡಿಗೆ ನಡೆಸುತ್ತಿದ್ದ ಆಟೋ ರಿಕ್ಷಾಗಳನ್ನು ಗಂಗೊಳ್ಳಿಯ ಮೇಲ್‍ಗಂಗೊಳ್ಳಿ ಪೊಲೀಸ್ ಚೆಕ್‍ಪೋಸ್ಟ್ ಬಳಿ ತಡೆದು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿದ್ದಾರೆ.

ಮೇ 3ರವರೆಗೆ ಲಾಕ್ ಡೌನ್ ಇರುವುದರಿಂದ ಯಾವುದೇ ಆಟೋ ರಿಕ್ಷಾಗಳು ರಸ್ತೆಗಿಳಿಯುವಂತಿಲ್ಲ ಮತ್ತು ಬಾಡಿಗೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿರುವ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಭೀಮಾಶಂಕರ್ ಎಸ್., ಕಾನೂನು ಉಲ್ಲಂಘಿಸಿ ರಸ್ತೆಗಿಳಿಯುವ ಆಟೋ ರಿಕ್ಷಾವನ್ನು ಸೀಜ್ ಮಾಡಲಾಗುವುದು ಎಂದು ರಿಕ್ಷಾ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗಂಗೊಳ್ಳಿ ಪೊಲೀಸರು ಏಕಾಏಕಿ ಆಟೋ ರಿಕ್ಷಾ ತಡೆದು ರಿಕ್ಷಾವನ್ನು ವಶಪಡಿಸಿಕೊಳ್ಳಲು ಆರಂಭಿಸಿದ್ದರಿಂದ ರಿಕ್ಷಾದಲ್ಲಿ ಪ್ರಯಾಣಿಕರು ವಿಚಲಿತರಾದರು. ಕೆಲ ಹೊತ್ತು ರಿಕ್ಷಾದಲ್ಲೇ ಕಾಲ ಕಳೆದ ಕೆಲ ಪ್ರಯಾಣಿಕರು, ಕೊನೆಗೂ ಬೇರೆ ದಾರಿ ಕಾಣದೆ ರಿಕ್ಷಾದಿಂದ ಇಳಿದು ಮನೆ ಮಠ ಸೇರಿಕೊಂಡರು.