ನನಗೆ ಗಾಂಜಾ ಬೇಡ, ಮಾಲ್ ಬೇಕೆಂದಿದ್ದ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಗಿರ್ಕಿ ಹೊಡೆಯುತ್ತಿದ್ದ ಡ್ರಗ್ಸ್ ದಂಧೆ ಪ್ರಕರಣ ಇದೀಗ ನಟಿ ದೀಪಿಕಾ ಪಡುಕೋಣೆಯ ಕೊರಳಿಗೂ ಸುತ್ತಿಕೊಂಡಿದೆ.

ಬಾಲಿವುಡ್‌ ಗೆ ಅಂಟಿರುವ ಡ್ರಗ್ಸ್ ಜಾಲದ ಬಗ್ಗೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆಯನ್ನು ತೀವ್ರಗೊಳಿಸಿದ್ದು, 2017ರಲ್ಲಿ ದೀಪಿಕಾ ಮಾಡಿರುವ ವಾಟ್ಸ್ಆ್ಯಪ್‌ ಸಂದೇಶ ವಿನಿಮಯ ಈಗ ಬಹಿರಂಗಗೊಂಡಿದೆ. ‘ಡಿ’ ಮತ್ತು ‘ಕೆ’ ಎಂಬ ಅಕ್ಷರದಲ್ಲಿ ಸಂದೇಶ ವಿನಿಮಯವಾಗಿದ್ದು, ‘ಡಿ’ ಎಂದರೆ ದೀಪಿಕಾ ಪಡುಕೋಣೆ ಮತ್ತು ‘ಕೆ’ ಎಂದರೆ ಕರೀಷ್ಮಾ ಪ್ರಕಾಶ್‌ ಎಂದು ಹೇಳಲಾಗಿದೆ.

ನನಗೆ ಮಾಲ್ ಬೇಕು.?
ನನಗೆ ಗಾಂಜಾ ಬೇಡ; ಮಾಲ್‌ (ಮಾದಕ ವಸ್ತು) ಇದ್ದರೆ ಕೊಡಿ ಎಂದು ದೀಪಿಕಾ ಅವರು, ಕರೀಷ್ಮಾಗೆ ಸಂದೇಶ ಕಳುಹಿಸಿದ್ದಾರೆ.
ಈ ಸಂದೇಶ ಬಹಿರಂಗಗೊಂಡ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಕರೀಷ್ಮಾಗೆ ಎನ್‌ಸಿಬಿ ನೋಟಿಸ್‌ ಕೂಡ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಸಿಬಿ ಈಗಾಗಲೇ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋಯಿಕ್‌ ಬಂಧಿಸಿದೆ. ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಹಲವು ಬಾಲಿವುಡ್‌ ನಟ, ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಎನ್ ಸಿಬಿ ಒಬ್ಬೊಬ್ಬರಿಗೆ ನೋಟಿಸ್ ಜಾರಿ ಮಾಡುತ್ತಿದೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಬಾಲಿವುಡ್ ನ ಇನ್ನಷ್ಟು ಭಾರೀ ಕುಳಗಳ ಹೆಸರು ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.