ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ (38) ಚಿಕಿತ್ಸೆ ಫಲಕಾರಿಯಾಗದೆ ಅಪೋಲೊ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸಂಚಾರ ವಿಜಯ್ ಕೊನೆಯುಸಿರೆಳೆದಿದ್ದಾರೆ ಎಂಬುದನ್ನು ಒಪ್ಪಲು ಬಹಳ ಕಷ್ಟವಾಗುತ್ತಿದೆ. ಲಾಕ್ಡೌನ್ಗೂ ಮೊದಲು ಕೆಲವು ಬಾರಿ ಅವರನ್ನ ಭೇಟಿಯಾಗಿದ್ದೆ. ಎಲ್ಲರೂ ಅವರ ಮುಂಬರುವ ಚಿತ್ರಕ್ಕಾಗಿ ನಿರೀಕ್ಷಿತರಾಗಿದ್ದರು.. ಅದು ರಿಲೀಸ್ಗೆ ಕಾಯುತ್ತಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ಎಂದಿದ್ದಾರೆ. ಇನ್ನು ಸಂಚಾರಿ ವಿಜಯ್ ಅವರ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸ್ನೇಹಿತ ನವೀನ್ ಜೊತೆ ಶನಿವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ವಿಜಯ್ ಅವರ ಮೆದುಳಿನ ಎರಡೂ ಭಾಗಕ್ಕೆ ಹೊಡೆತ ಬಿದ್ದು, ರಕ್ತ ಹೆಪ್ಪುಗಟ್ಟಿತ್ತು. ಭಾನುವಾರ ಬೆಳಿಗ್ಗೆಯೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದ ಅಪೋಲೊ ಆಸ್ಪತ್ರೆ ವೈದ್ಯರು, ವಿಜಯ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಮೃತಪಟ್ಟಿದ್ದಾರೆ.