ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ, ಬದುಕುವ ಸಾಧ್ಯತೆ ಕಡಿಮೆ: ವೈದ್ಯರ ಹೇಳಿಕೆ

ಬೆಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿದ್ದು, ಅವರು ಬದುಕುವುದು ಕಷ್ಟವೆಂದು ವೈದ್ಯರು ತಿಳಿಸಿದ್ದಾರೆ.

ಸ್ನೇಹಿತ ನವೀನ್ ಜೊತೆ ಶನಿವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ವಿಜಯ್ ಅವರ ಮೆದುಳಿನ ಎರಡೂ ಭಾಗಕ್ಕೆ ಹೊಡೆತ ಬಿದ್ದು, ರಕ್ತ ಹೆಪ್ಪುಗಟ್ಟಿತ್ತು.

ಭಾನುವಾರ ಬೆಳಿಗ್ಗೆಯೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದ ಅಪೋಲೊ ಆಸ್ಪತ್ರೆ ವೈದ್ಯರು, ವಿಜಯ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆದರೆ, ಇದುವರೆಗೂ ವಿಜಯ್ ಅವರಿಗೆ ಪ್ರಜ್ಞೆ ಬಂದಿಲ್ಲ.
ಶಸ್ತ್ರಚಿಕಿತ್ಸೆ ಬಳಿಕವೂ ವಿಜಯ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ‌ ಕಂಡು ಬಂದಿಲ್ಲ. ಸದ್ಯಕ್ಕೆ ಹೆಚ್ಚು‌ ಮಾಹಿತಿ ನೀಡಲಾಗದು ಎಂದು ಅಪೋಲೊ ಆಸ್ಪತ್ರೆ ವೈದ್ಯ ಅರುಣ್ ಹೇಳಿದ್ದಾರೆ.

ವಿಜಯ್ ತಮ್ಮ ಸಿದ್ದೇಶ್ ಕುಮಾರ್, ‘ಅಣ್ಣ ಬದುಕುವುದು ಕಷ್ಟ. ಆತನ ಮೆದುಳು ನಿಷ್ಕ್ರಿಯವಾಗಿದೆ ಎಂದೂ ವೈದ್ಯರು ತಿಳಿಸಿದ್ದಾರೆ. ಆ ರೀತಿಯಾದರೆ, ಅಣ್ಣನ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಚಿಕಿತ್ಸೆಗೆ ವಿಜಯ್ ಸ್ಪಂದಿಸುತ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ. ‌ನನ್ನ ಅಣ್ಣನಿಗೂ ಇದೇ ರೀತಿ ಆಗಿತ್ತು. ಆತ ಕೆಲ ದಿನ ಬಿಟ್ಟು ಹುಷಾರಾಗಿದ್ದ. ವಿಜಯ್ ಸಹ ಹುಷಾರಾಗಿ ಬರಲಿ ಎಂದು ನಟ ನೀನಾಸಂ ಸತೀಶ್ ಹೇಳಿದರು.