ನಟ ಶಂಕರನಾಗ್ ಮರೆಯಾಗಿ 31 ವರ್ಷ ಕಳೆದರೂ, ಕನ್ನಡ ಚಿತ್ರರಸಿಕರ ಮನದಲ್ಲಿ ಇಂದಿಗೂ ಜೀವಂತ.!

ನಟ ಶಂಕರನಾಗ್ ಮರೆಯಾಗಿ ಇವತ್ತಿಗೆ ಸರಿಯಾಗಿ 31 ವರ್ಷ ಕಳೆದರೂ ಕನ್ನಡ ಚಿತ್ರರಸಿಕರ ಮನದಲ್ಲಿ ಆಟೋ ಚಾಲಕರ ಕಣ್ಮಣಿಯಾಗಿ ಇವತ್ತಿಗೂ ಜೀವಂತ. ಕೇವಲ 35 ವರ್ಷದ ಜೀವಿತಾವಧಿಯಲ್ಲಿ ಅವರು ಮಾಡಿದ ಸಾಧನೆ ಗಳಿಸಿದ ಯಶಸ್ಸು ಸಂಪಾದಿಸಿದ ಅಭಿಮಾನಿ ಬಳಗ ಕಂಡರೆ ಎಂತವರಿಗೂ ಅಚ್ಚರಿ ಆಗದೆ ಇರದು.

ಹೊನ್ನಾವರದ ಸಮೀಪದ ನಾಗರಕಟ್ಟೆ ಕುಟುಂಬದ ಮೂಲವಾದರೂ ಶಂಕರನಾಗ್ ಉಡುಪಿಯಲ್ಲಿ ನವೆಂಬರ್ 9,1954ರಲ್ಲಿ ಜನಿಸಿದ್ದುಅನ್ನೋ ವಿಷ್ಯ ಎಷ್ಟೋ ಜನರಿಗೆ ಗೊತ್ತೇ ಇಲ್ಲಇದನ್ನು ಅವರ ಸಹೋದರ ಖ್ಯಾತ ನಟ ಅನಂತನಾಗ್ ರವರು ತಾವು ಬರೆದ ” ನನ್ನ ತಮ್ಮ ಶಂಕರ” ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಶಂಕರನಾಗ್ ವಿದ್ಯಾಭ್ಯಾಸ ಮುಗಿಸಿದ ನಂತರ ಮುಂಬೈಗೆ ತೆರಳಿ ಅಲ್ಲಿ ಮರಾಠಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭ ಮಾಡಿದರು. 1978ರಲ್ಲಿ ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮೊದಲ ಚಿತ್ರದಲ್ಲಿಯೇ ಅವರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು.

1980ರಲ್ಲಿ ‘ಮಿಂಚಿನ ಓಟ’ ಚಿತ್ರದ ಮೂಲಕ ನಿರ್ದೇಶನಕ್ಕೂ ಕೈ ಹಾಕಿದರು ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ವಿಶೇಷ ಯಶಸ್ಸು ಗಳಿಸದ್ದಿದರೂ ಏಳು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. 1983ರಲ್ಲಿ ಮಾಡಿದ “ನೋಡಿ ಸ್ವಾಮಿ ನಾವಿರೋದೇ ಹೇಗೆ’ ಹಾಗೂ 1984ರಲ್ಲಿ’ಆಕ್ಸಿಡೆಂಟ್’ ಚಿತ್ರಗಳು ಉತ್ತಮ ಹೆಸರನ್ನುತಂದುಕೊಟ್ಟವು. 1984ರಲ್ಲಿ ಒಂದೇ ವರ್ಷದಲ್ಲಿ ಶಂಕರನಾಗ್ ನಟಿಸಿದ್ದ 14 ಚಿತ್ರಗಳು ಬಿಡುಗಡೆಗೊಂಡಿದ್ದು ಕನ್ನಡ ಚಿತ್ರರಂಗದಲ್ಲಿ ಒಂದು ದಾಖಲೆ.

1984ರ ವರ್ಷ ಮುಗಿಯೋದರಲ್ಲಿತ್ತು ಆಗ ಶಂಕರನಾಗ್ ಕನ್ನಡ ಚಿತ್ರರಂಗದವರು ಕನ್ನಡ ಚಿತ್ರಗಳಿಗೆ ಡಬ್ಬಿಂಗ್ ಗೆ ಸರಿಯಾದ ಡಬ್ಬಿಂಗ್ ಥೀಯೇಟರ್ ಗಳಿಲ್ಲದೆ ಮುಂಬೈ ಗೆ ಹೋಗಿ ಪಡುತ್ತಿದ್ದ ಪಾಡನ್ನು ಕಂಡು ಕರ್ನಾಟಕದಲ್ಲೇ ಒಂದು ಇಲೆಕ್ಟ್ರಾನಿಕ್ ಸ್ಟುಡಿಯೋ ಮಾಡಬೇಕು ಅಂತ ಪಣ ತೊಟ್ಟು ಗೆಳೆಯರ ಜೊತೆಗೂಡಿ ಕೇವಲ 8 ತಿಂಗಳ ಅವಧಿಯಲ್ಲಿ ನಿರ್ಮಿಸಿ ವಿದೇಶಗಳಿಂದ ಯಂತ್ರಗಳನ್ನು ಆಮದು ಮಾಡಿ ಸಂಕೇತ್ ಇಲೆಕ್ಟ್ರಾನಿಕ್ ಸ್ಟುಡಿಯೋವನ್ನು ಆಗಸ್ಟ್ 15th 1985ರಲ್ಲಿ ಪ್ರಾರಂಭಿಸಿದ್ದರು.

ಖ್ಯಾತ ಲೇಖಕ ಆರ್. ಕೆ. ನಾರಾಯಣ್ ಅವರ ಕೃತಿ ಆಧಾರಿತ “ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು1986ರಲ್ಲಿ ನಿರ್ದೇಶಿಸಿ ಭಾರತೀಯ ದೂರದರ್ಶನದಲ್ಲೇ ಅಳಿಸಲಾಗದ ಧಾಖಲೆ ನಿರ್ಮಿಸಿ ಖ್ಯಾತಿಯ ಉತ್ತುಂಗಕ್ಕೆ ಏರಿದರು. ಶಂಕರನಾಗ್ ಅವರ ಪತ್ನಿ ಅರುಂಧತಿನಾಗ್ ಕೂಡ ಮರಾಠಿ ರಂಗಭೂಮಿಯ ಪ್ರತಿಭೆ ಅಲ್ಲೇ ಪರಿಚಯವಾಗಿ ನಂತರ ಪ್ರೀತಿಸಿ ಮದುವೆಯಾದರು. ಮಗಳು ಕಾವ್ಯ.

ಶಂಕರನಾಗ್ ಹುಟ್ಟು ಕನಸುಗಾರನಾಗಿದ್ದರು ಪಾದರಸದಂತಹ ವ್ಯಕ್ತಿತ್ವ ಸಮಯಕ್ಕೆ ತುಂಬಾ ಬೆಲೆಕೊಡುತ್ತಿದ್ದರು ಒಂದು ಕ್ಷಣವನ್ನು ಪೋಲು ಮಾಡದೇ ಸದಾ ಕಾಲ ಚಟುವಟಿಕೆಯಿಂದ ಇರುತ್ತಿದ್ದರು ಅವರ ಕೆಲಸದ ವೇಗ ಹಾಗೂ ದೂರದೃಷ್ಟಿಯನ್ನು ಹೊಂದಿದ್ದ ಚಿಂತನೆಗಳನ್ನು ಕಣ್ಣಾರೆ ಕಂಡ ಸಹ ಕಲಾವಿದರು ಈಗಲೂ ಅಚ್ಚರಿಪಡ್ತಾರೆ. ಅಸಾಧ್ಯ ಅನ್ನೋ ಪದಾನೇ ಅವರಿಗೆ ಗೊತ್ತಿರಲಿಲ್ಲಅನ್ನೋದನ್ನು ನೆನಪಿಸಿಕೊಳ್ತಾರೆ. ಕೇವಲ 12 ವರ್ಷದಲ್ಲಿ ಸರಿಸುಮಾರು 92 ಚಿತ್ರದಲ್ಲಿ ಅಭಿನಯಿಸಿದ್ದು ಅವರ ವೇಗಕ್ಕೆ ಸಾಕ್ಷಿ. ಕೊನೆಗೆ ವೇಗವೇ ಅವರ ಪ್ರಾಣಕ್ಕೆ ಕುತ್ತು ತಂದದ್ದು ದಾವಣಗೆರೆ ಸಮೀಪ ಕಾರು ಅಫಘಾತದಲ್ಲಿ ಸೆಪ್ಟೆಂಬರ್ 30th, 1990ರಂದು ದುರ್ಮರಣಕ್ಕೆ ಇದಾಗಿದ್ದು ವಿಪರ್ಯಾಸ.

ಆ ಕಾಲಕ್ಕೆ ನಂದಿ ಬೆಟ್ಟಕ್ಕೆ ರೋಪ್ ವೇ ಹಾಕೋ ಯೋಜನೆ ಹಾಗೇನೇ ಮೆಟ್ರೋ ಬಗ್ಗೆ ಕನಸು ಕಂಡಿದ್ದರು ಶಂಕರನಾಗ್. ಸಿನೆಮಾಗಳಲ್ಲಿ ನಟಿಸುತ್ತಿದ್ದರೂ ಎಲ್ಲಿಯೂ ಸಹ ರಂಗಭೂಮಿಯ ಬಗ್ಗೆ ಅವರಿಗಿದ್ದ ಪ್ರೀತಿ ಆಸಕ್ತಿ ಕಿಂಚಿತ್ತೂ ಕಮ್ಮಿ ಆಗಿರಲಿಲ್ಲ ರಂಗಭೂಮಿ ಕಲಾವಿದರಿಗೆ ನೆರವಾಗುವಂತೆ ನಾಟಕಗಳ ಪ್ರದರ್ಶನ ಸುಗಮವಾಗಿ ನಡೆಯುವಂತೆ ರಂಗಮಂದಿರವನ್ನು ನಿರ್ಮಿಸಬೇಕೆಂದಿದ್ದರು ಆದರೆ ಯೋಜನೆ ಕಾರ್ಯರೂಪಕ್ಕೆ ಬರೋ ಮುಂಚೆನೇ ಶಂಕರನಾಗ್ ನಮ್ಮನೆಲ್ಲ ಬಿಟ್ಟು ಅಗಲಿದರು ಆದರೆ ಅವರ ಪತ್ನಿ ಅರುಂಧತಿನಾಗ್ ಅವರ ಕನಸಿನ ಯೋಜನೆಯನ್ನು ಪೂರ್ಣಗೊಳಿಸಿ ಅವರ ನೆನಪಲ್ಲಿ ‘ರಂಗಶಂಕರ’ ಎಂದು ಹೆಸರಿಟ್ಟಿದ್ದಾರೆ.

ನಾಗೇಶ್ ಶೆಣೈ