ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಕರಾವಳಿಯ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಸದ್ಯಕ್ಕಂತೂ ಕಿರಿಕ್ ಪಾರ್ಟಿ-2 ಬರುವ ಯಾವುದೇ ಸೂಚನೆಗಳಿಲ್ಲ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್ ಆಂಟನಿ, ಪುಣ್ಯಕೋಟಿ 1 ಮತ್ತು 2, ಮಿಡ್ ನೈಟ್ ಟು ಮೋಕ್ಷ… ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಕಿರಿಕ್ ಪಾರ್ಟಿ-2 ಕೂಡ ಇಲ್ಲ… ಆದರೆ ಕಿರಿಕ್ ಪಾರ್ಟಿ-2 ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆ. ನೋಡೋಣ. ನೀವು ಅಂತರ್ಜಾಲದಲ್ಲಿ ಓದುವ ಯಾವುದೂ ನಿಜವಲ್ಲ. ಎಂದಿಗೂ ನಿಜವಾಗಿರಲಿಲ್ಲ… ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರ ತೆರೆಕಂಡು ಆರು ವರ್ಷಗಳಾಗಿವೆ. ತಮ್ಮ ಮುಂದಿನ ನಾಲ್ಕು ಚಲನಚಿತ್ರಗಳಲ್ಲಿ ವ್ಯಸ್ತವಾಗಿರುವ ರಕ್ಷಿತ್ ಸದ್ಯಕ್ಕಂತೂ ಕಿರಿಕ್ ಪಾರ್ಟಿ-2 ಮಾಡುವ ಯೋಚನೆಯಲ್ಲಿಲ್ಲ. ಅಭಿಮಾನಿಗಳಿಗೆ ಇದರಿಂದ ನಿರಾಸೆಯಾದರೂ ರಕ್ಷಿತ್ ನ ಮುಂಬರುವ ಚಿತ್ರ, ಉಳಿದವರು ಕಂಡಂತೆ ಚಿತ್ರದ ಸೀಕ್ವಲ್ ರಿಚರ್ಡ್ ಆಂಟನಿ ಬಗ್ಗೆ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವುದಂತೂ ಸತ್ಯ. ಇದಲ್ಲದೆ, ರಕ್ಷಿತ್ ಕನ್ನಡ ಚಿತ್ರರಂಗದಲ್ಲೇ ವ್ಯಸ್ತರಾಗಿರುವುದರಿಂದ ಇತರ ಭಾಷೆಗಳಲ್ಲಿ ನಟಿಸಲಿದ್ದಾರೆ ಎನ್ನುವ ಊಹಾಪೋಹಗಳಿಗೂ ತೆರೆಬಿದ್ದಿದೆ.