ಸಿನಿಮಾದಿಂದ ಭರವಸೆ ಮತ್ತು ನಂಬಿಕೆಯ ಪಾಠಗಳು: ಚಿತ್ರ ನಟ ಅನಿರುದ್ದ್ ಅವರ ಅನುಭವದ ಮಾತುಗಳು….

ನಾನು ಎಂ. ಎಸ್. ಸತ್ಯುರವರ ‘ಇಜ್ಜೋಡು’ (2010) ಚಲನಚಿತ್ರದಲ್ಲಿ ನಾಯಕ ಆನಂದನ ಪಾತ್ರ ನಿರ್ವಹಿಸಿದ್ದೆ. ನಾಯಕಿ ಚೆನ್ನಿ, ದೇವದಾಸಿಯಾಗಿರುವುದರಿಂದ (ಸಡಿಲವಾಗಿ ಅನುವಾದ ಮಾಡಿದರೆ ದೇವರ ಆಳು ಎಂದರ್ಥ) ತಾನು ಜನರಿಗೆ ಲೈಂಗಿಕ ಸೇವೆಗಳನ್ನು ಒದಗಿಸಬೇಕೆಂದು ನಂಬಿರುತ್ತಾಳೆ. ಇದು, ಕೇವಲ ಮುೂಢನಂಬಿಕೆ ಎಂದು ಆನಂದ ಅವಳಿಗೆ ಹೇಳುತ್ತಾನೆ. ಆಕೆ ನಿಜವಾಗಿಯೂ ಗಣಿಕೆ ಕೆಲಸ ಮಾಡುತ್ತಿರುವಳೆಂದೂ ಮತ್ತು ಶೋಷಣೆಗೆ ಒಳಗಾದವಳೆಂದೂ ತಿಳಿಸುತ್ತಾನೆ. ಈ ಕೆಲಸ ಬಿಟ್ಟು ಮದುವೆಯಾಗೆಂದೂ ಅವಳಿಗೆ ಸಲಹೆ ನೀಡುತ್ತಾನೆ. ಮೊದಲು ಆಘಾತಗೊಂಡ ಚೆನ್ನಿ, ಬೇಗನೇ ತಾನು ಯಾವ ಪ್ರಮಾದದೊಳಗೆ ದೂಡಲ್ಪಟ್ಟಿದ್ದಾಳೆಂಬುದನ್ನು ಅರಿತುಕೊಳ್ಳುತ್ತಾಳೆ. ಇದರಿಂದ, ಆನಂದನ ಸಲಹೆಯಂತೆ ಮದುವೆಯಾಗುವ ನಿರ್ಧಾರ ತಾಳುತ್ತಾಳೆ.

ಆದರೆ, ಯಾರೂ ಒಬ್ಬ ದೇವದಾಸಿಯನ್ನು ಮದುವೆಯಾಗಲು ಇಷ್ಟಪಡುವುದಿಲ್ಲವೆಂದು ಅವಳು ಬಲ್ಲಳು. ಅವಳ ಒಂದೇ ಭರವಸೆಯೆಂದರೆ, ವಾಸ್ತವವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಲ್ಲ ಹಾಗೂ ತನ್ನ ಕುರಿತು ಕಳಕಳಿಯುಳ್ಳ ಆನಂದ, ತನ್ನನ್ನು ಒಪ್ಪುವಷ್ಟು ಸಂವೇದನಾಶೀಲ ಮನಸ್ಸನ್ನು ಖಂಡಿತವಾಗಿಯೂ ಹೊಂದಿರುತ್ತಾನೆ ಎಂಬುದು. ಆದರೆ, ದುರದೃಷ್ಟವಶಾತ್, ಅವನು ಒಪ್ಪಿಕೊಳ್ಳುವುದಿಲ್ಲ. ಚೆನ್ನಿಯೀಗ ಇಕ್ಕಟ್ಟಿಗೆ ಸಿಲುಕಿದ್ದಾಳೆ– ನೆಚ್ಚಲು ಅವಳ ನಂಬಿಕೆಯಾಗಲೀ ಅಥವಾ ಬದುಕು ಸಾಗಿಸಲು ಭರವಸೆಯಾಗಲೀ ಅವಳ ಬಳಿ ಈಗಿಲ್ಲ. ಹೀಗೆ, ಸಂಪೂರ್ಣವಾಗಿ ತನ್ನ ಬದುಕು ಧ್ವಂಸಗೊಂಡ ಮೇಲೆ ಹತಾಶಳಾದ ಚೆನ್ನಿ, ತನ್ನ ಜೀವನವನ್ನು ಕೊನೆಗಾಣಿಸುತ್ತಾಳೆ.

ಅವಳು ಸತ್ತಿರುವುದನ್ನು ನೋಡಿದ ಆನಂದನಿಗೆ ಮಾತು ಹೊರಡದೆ, ದಿಗ್ಭ್ರಮೆಯಾಗುತ್ತದೆ. ಏಕೆಂದರೆ ಅವನಿಗೆ ಗೊತ್ತು, ತಾನು ಅವಳ ನಂಬಿಕೆ ಮತ್ತು ಭರವಸೆಯನ್ನು ಛಿದ್ರ ಮಾಡಿದ್ದರಿಂದ ಈ ಸಾವು ಸಂಭವಿಸಿತೆಂದು. ನನ್ನನ್ನು ನಾನೇ ಮೇಲಿಂದ ಮೇಲೆ ಪ್ರಶ್ನೆ ಮಾಡಿಕೊಳ್ಳುವುದಿದೆ — ಆನಂದ ಚೆನ್ನಿಗೆ ಅದು ಕೇವಲ ಮುೂಢನಂಬಿಕೆಯಷ್ಟೇ ಎಂದು ಅರಿವು ಮೂಡಿಸಿದ್ದು ಎಷ್ಟು ಸರಿ? ಎಂದು‌. ಆದರೆ ಆಗ, ಸ್ಟೀವನ್ ಸ್ಪೀಲ್ಬರ್ಗ್ ನ ‘ ಇಂಡಿಯಾನ ಜೋನ್ಸ್ ಅಂಡ್ ದಿ ಲಾಸ್ಟ್ ಕ್ರುಸೇಡ್’ (1989)ನ ಸೇತುವೆಯ ದೃಶ್ಯ ನೆನಪಾಯಿತು. ಆ ದೃಶ್ಯದಲ್ಲಿ ಬರುವ ಸೇತುವೆ ಅಕ್ಷರಶಃ ಅಗೋಚರವಾಗಿರುತ್ತದೆ. ಆದರೂ ಇಂಡಿಯಾನ ಜೋನ್ಸ್, ‘ಸಂಪೂರ್ಣ ಬಲವಾದ ನಂಬಿಕೆ’ಯೊಂದಿಗೆ ಹಾರಿ, ತನ್ನ ಹಿನ್ನೆಲೆಯಿಂದ ಪೂರ್ತಿಯಾಗಿ ಮರೆಮಾಚಲ್ಪಟ್ಟಿರುವ ಸೇತುವೆಯ ಮೇಲೆ ಕಾಲಿಡುತ್ತಾನೆ. ನಾನೆಂದುಕೊಂಡೆ — ಮುೂಢನಂಬಿಕೆ’ಯಲ್ಲವೇ ಅವನನ್ನು ಹಾಗೆ ಜಿಗಿಯುವಂತೆ ಮಾಡಿದ್ದು?

ಓಹ್, ಎಷ್ಟೊಂದು ಗೊಂದಲ! ನಂಬಿಕೆ ಮತ್ತು ಮುೂಢನಂಬಿಕೆಯ ನಡುವಿನ ವ್ಯತ್ಯಾಸಗಳ ಹಾಗೂ ಅತ್ಯಂತ ನಿರಾಶಾದಾಯಕ ಪರಿಸ್ಥಿತಿಯಲ್ಲೂ ಭರವಸೆ ಇಟ್ಟುಕೊಳ್ಳುವ ಕುರಿತು ಅಸಂಖ್ಯಾತ ಚರ್ಚೆಗಳಾಗಿರಬಹುದು.

ಒಬ್ಬ ವ್ಯಕ್ತಿಯು ಆಶಾಭಾವನೆ ಇಟ್ಟುಕೊಂಡೂ ತನ್ನ ನಂಬಿಕೆ ಉಳಿಸಿಕೊಳ್ಳುವುದಕ್ಕೆ ಇಡೀ ಜೀವಮಾನ ತೆಗೆದುಕೊಳ್ಳಬಹುದು. ಆದರೆ ಆ ನಂಬಿಕೆ ಅಲ್ಲಾಡಿದರೆ ಅಥವಾ ಛಿದ್ರವಾದರೆ ಅಥವಾ ಅವನ ಆ ಭರವಸೆಯನ್ನು ಬಾರಿಬಾರಿಗೂ ಪ್ರಶ್ನಿಸುವಂತಾದರೆ, ಆಗ ಆ ವ್ಯಕ್ತಿಯು ಸಾಮಾನ್ಯ ರೀತಿಯಲ್ಲಿ ಯೋಚಿಸದೆ, ಪರ್ಯಾಯ ಆಲೋಚನೆಯನ್ನು – ಅಂದರೆ ತಾರ್ಕಿಕವಾಗಿ ಆಲೋಚಿಸಲು ಆರಂಭಿಸಿ, ಯಾವುದೇ ವಿಷಯವನ್ನು (ಸಮಸ್ಯೆ) ಹಲವಾರು ಭಿನ್ನ ಕೋನಗಳಿಂದ ಪರಿಶೀಲಿಸಿ, ಸೃಜನಾತ್ಮಕವಾದ ವಿಧಾನವನ್ನು ಬಳಸುವಂತಾಗಬೇಕು.

ಚೆನ್ನಿಯ ನಂಬಿಕೆ ಮತ್ತು ಭರವಸೆ ನುಚ್ಚುನೂರಾದಾಗ, ಸೋತು ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ಭಿನ್ನ ರೀತಿಯಲ್ಲಿ ಆಲೋಚಿಸಿ, ತನ್ನ ಬದುಕನ್ನು ಬೇರೊಂದು ದಿಕ್ಕಿನಲ್ಲಿ ಸಾಗಿಸಬೇಕಿತ್ತು. ಹೀಗೆ ಪರ್ಯಾಯ ಆಲೋಚನೆ ಮಾಡಿಯೂ, ತನ್ನೊಳಗೆ ತಾನು ತುಳಿಯುತ್ತಿರುವುದೇ ಸರಿಯಾದ ಹಾದಿ ಎಂದು ಮನಗಂಡರೆ ಆಗ, ಏನೇ ಬರಲಿ, ಮನುಷ್ಯನು ತನ್ನ ನಿಲುವಿಗೆ ಬದ್ಧನಾಗಿರಬೇಕು.

‘ಕೌನ್ ಪ್ರವೀಣ್ ತಾಂಬೆ?’ (2022) ಕ್ರಿಕೆಟಿಗ ತಾಂಬೆಯವರ ಜೀವನ ಪಯಣವನ್ನು ಹಿಡಿದಿಡುತ್ತದೆ. 41 ವರ್ಷಗಳವರೆಗೂ ತಾಂಬೆಯವರನ್ನು ವೃತ್ತಿಪರ ಕ್ರಿಕೆಟ್ ಆಡಲು ಆಯ್ಕೆ ಮಾಡಿರಲಿಲ್ಲ. ಸಾಧಾರಣವಾಗಿ ನಿವೃತ್ತಿ ಹೊಂದಿರುವ ವಯಸ್ಸು ಅದು. ಅವರು ಬಹಳ ಕಷ್ಟಪಟ್ಟರು ಹಾಗೂ ಆಯ್ಕೆಯಾಗಲು ಕಾದರು. ಜೊತೆಗೆ ನಿರಾಸೆ ಹೊಂದಿದರೂ ಕೂಡ. ಚಲನಚಿತ್ರದ ಒಂದು ದೃಶ್ಯದಲ್ಲಿ ಆತ ಹೇಳುತ್ತಾರೆ, “ನಾನೊಂದು ದಿನ ಯಶಸ್ವಿಯಾದರೆ, ಜನ ನನ್ನನ್ನು ಶ್ರೇಷ್ಠ ಎನ್ನುತ್ತಾರೆ, ಇಲ್ಲವೆಂದಾದರೆ ಆಗ, ನನ್ನನ್ನು ಹುಚ್ಚನೆಂದು ಕರೆಯುತ್ತಾರೆ”. ಜನರ ಸತತ ನಕಾರಾತ್ಮಕ ಪ್ರತಿಕ್ರಿಯೆಗಳಿದ್ದರೂ ತಾಂಬೆಯವರು ಅವಿರತ ಯತ್ನದಿಂದ ತಮ್ಮ ಹೊಟ್ಟೆಯೊಳಗೆ ಅನಿಸಿದ್ದನ್ನು, ಉತ್ಸಾಹವನ್ನು, ನಂಬಿಕೆಯನ್ನು ಬೆಂಬತ್ತಿದರು. ಒಂದು ದಿನ ತಾನು ಖಂಡಿತವಾಗಿಯೂ ರಣಜಿ ಟ್ರೋಫಿ ಮ್ಯಾಚೊಂದರಲ್ಲಿ ಆಡಲು ಆಯ್ಕೆ ಆಗುವೆನೆಂಬ ಭರವಸೆ ಹೊಂದಿದ್ದರು. ಪ್ರತಿ ಬಾರಿ ಅವರ ನಂಬಿಕೆಯನ್ನು ಪ್ರಶ್ನಿಸಿದಾಗಲೂ ಆ ಸವಾಲನ್ನು ಸ್ವೀಕರಿಸಿ ಅದರೆಡೆಗೆ ಮತ್ತಷ್ಟು ಪರಿಶ್ರಮ ಹಾಕಿದರು. ಅದೇ ಚಲನಚಿತ್ರದಲ್ಲಿ ಪ್ರಸ್ತಾಪಿಸಿದಂತೆ , ” ಪ್ರವೀಣ್ ತಾವು ಅಂದುಕೊಂಡಿದ್ದನ್ನು ಸಾಧಿಸಿದುದರಿಂದ ಹೀರೋ ಆಗಲಿಲ್ಲ. ಆದರೆ ಮೈದಾನವನ್ನು ಬಿಟ್ಟು ಹೋಗದೇ ಇರೋದರಿಂದ ಹೀರೋ ಆದರು”.

ಈ ಚಲನಚಿತ್ರಗಳಿಂದ ನಾನು ಕಲಿತಿದ್ದೇನೆಂದರೆ, ಒಬ್ಬ ಹೀರೋ ಆಗಬೇಕೆಂದರೆ ನನ್ನ ಕನಸುಗಳನ್ನು ಬೆಂಬತ್ತಬೇಕು, ಪರ್ಯಾಯ ಆಲೋಚನೆ ಮಾಡಿಯಾದರೂ ಸರಿ. ಆದರೆ, ಎಂದಿಗೂ, ಯಾವತ್ತಿಗೂ ‘ಚೆನ್ನಿ’ ತೆಗೆದುಕೊಂಡ ತೀವ್ರ ನಿರ್ಧಾರವನ್ನು ನಾನು ತೆಗೆದು ಕೊಳ್ಳಬಾರದು ಹಾಗೂ ಮೈದಾನವನ್ನು ಬಿಡಬಾರದು.

ಲೇಖಕ: ಅನಿರುದ್ಧ
ನಟ, ಲೇಖಕ, ಗಾಯಕ ಮತ್ತು ನಿರ್ದೇಶಕ

ಕನ್ನಡಕ್ಕೆ ಅನುವಾದ: ಜಯಶ್ರೀ