udupixpress
Home Trending ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾರೂ ಗೈರಾಗದಂತೆ ಕ್ರಮ: ಸಚಿವ ಸುರೇಶ್‌ಕುಮಾರ್

ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾರೂ ಗೈರಾಗದಂತೆ ಕ್ರಮ: ಸಚಿವ ಸುರೇಶ್‌ಕುಮಾರ್

ಬೆಂಗಳೂರು: ಸಾರಿಗೆ ಸಮಸ್ಯೆಯಿಂದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಗೂ ಗೈರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ  ಸಿಇಒಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಡಿಪಿಐಗಳೊಂದಿಗೆ ವಿಡಿಯೊ ಸಂವಾದದಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ಅವರು ಪರಿಶೀಲಿಸಿದ್ದಾರೆ.
ಮಳೆಗಾಲದಲ್ಲಿ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರದೇಶದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆ  ರಾಜ್ಯದ  ಗಡಿಭಾಗದ ವಿದ್ಯಾರ್ಥಿಗಳು ಹಾಗೆಯೇ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ  ಸಾಧ್ಯತೆಯಿರುವ ಪ್ರದೇಶದ ಜನವಸತಿ ಪ್ರದೇಶದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನೂ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕೆಂದರು.
ಈಗಾಗಲೇ ಇಲಾಖೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದೆ. ಕೆಲ ದಾನಿಗಳು ಮಾಸ್ಕ್ ವಿತರಿಸಲು ಮುಂದೆ ಬಂದಿದ್ದಾರೆ. ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುವುದರಿಂದ ಅವರಿಗೆ ಪರೀಕ್ಷಾ ಕೇಂದ್ರಗಳ ಮುಂದೆ ಮಾಸ್ಕ್ ಹಂಚಲು ಅವಕಾಶ ಮಾಡಿಕೊಡದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂದರು.
ಹೊರರಾಜ್ಯದ ವಿದ್ಯಾರ್ಥಿಗಳಿಗೆ ಅಗತ್ಯಬಿದ್ದರೆ ಆಯಾ ತಾಲ್ಲೂಕಿನ ಹಾಸ್ಟೆಲ್‍ಗಳಲ್ಲಿ ಊಟ ವಸತಿಗೆ ಕ್ರಮ ವಹಿಸಬೇಕು. ಆ ಹಾಸ್ಟೆಲ್‍ನಿಂದ ಪರೀಕ್ಷಾ ಕೇಂದ್ರಕ್ಕೆ ಬಸ್ ಇಲ್ಲವೇ ಜೀಪ್ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
error: Content is protected !!