ಕುಂದಾಪುರ: ಸನ್ಶೈನ್ ಗೆಳೆಯರ ಬಳಗ ರಿ. ಕ್ರೀಡಾಸಂಘ ಅಚ್ಲಾಡಿ ಇದರ ದಶಮಾನೋತ್ಸವ ಸಮಾರಂಭ ಭಾನುವಾರ ಅಚ್ಲಾಡಿ ಸನ್ಶೈನ್ ಕ್ರೀಡಾಂಗಣದಲ್ಲಿ ನಡೆಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸನ್ಶೈನ್ ಗೆಳೆಯರ ಬಳಗವನ್ನು ನಾನು ಬಹಳ ಹತ್ತಿರದಿಂದ ಕಂಡವನು. ಇಲ್ಲಿ ಒಂದಷ್ಟು ಯುವ ಮನಸ್ಸುಗಳು ಒಟ್ಟಿಗೆ ಸೇರಿ ಜನಪರ, ಬಡವರ ಪರ ಕಾರ್ಯಕ್ರಮವನ್ನು ಸಂಘಟಿಸಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಹಾಗೂ ಸಂಘಟನೆಗಳು ಸದಾ ಕ್ರೀಯಾಶೀಲವಾಗಿದ್ದಾಗ ಊರಿನ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಕಾಮಿಡಿ ಕಿಲಾಡಿ ರಿಯಾಲಿಟಿ ಶೋನ ಅಪ್ಪಣ್ಣ ಗಾಣಿಗೇರ ಮಾತನಾಡಿ, ಸಂಸ್ಥೆಯ ಸಾಮಾಜಮುಖಿ ಕಾರ್ಯಕ್ರಮ ಇದೇ ರೀತಿ ಮುಂದುವರಿಯಲಿ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ನಾಗರಾಜ್ ಪುತ್ರನ್ ಕೋಟ, ವೃತ್ತಿ ಸಾಧಕ ಗೋಪಾಲ ದೇವಾಡಿಗ ಪಾಂಡೇಶ್ವರ (ಐಸ್ಕ್ಯಾಂಡಿ ಗೋಪಾಲಣ್ಣ) ಕರ್ನಾಟಕ ಸರಕಾರದ ಲೆಕ್ಕಪರಿಶೋಧಕ ಜಗದೀಶ್ ಮರಕಾಲ ಅಚ್ಲಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಹತ್ತು ವರ್ಷದ ಅವಧಿಯಲ್ಲಿ ಸಂಸ್ಥೆಯ ಮುಖ್ಯ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಜೀವನ್ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ, ಕಿರಣ್ ಕುಮಾರ್, ಗುರುಪ್ರಸಾದ್ ಕಾಂಚನ್, ರಾಜೇಶ್ ಗಾಣಿಗ ಅಚ್ಲಾಡಿ, ಗಣೇಶ್ ಭಟ್, ಸುಶಾಂತ್ ಶೆಟ್ಟಿ, ಯೋಗೇಶ್ ಅವರನ್ನು ಗುರುತಿಸಲಾಯಿತು. ಅಶಕ್ತರಿಗೆ ಸಹಾಯಧನ, ಪ್ರತಿಭಾ ಪುರಸ್ಕಾರ ವಿತರಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ.ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಸಾಬ್ರಕಟ್ಟೆ ಜೈ ಗಣೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪ್ರಭು, ಬೆಂಗಳೂರಿನ ಉದ್ಯಮಿ ಪ್ರದೀಪ್ ಕುಮಾರ್ ಆಜ್ರಿ, ಸಂಸ್ಥೆಯ ಗೌರವಾಧ್ಯಕ್ಷ ಯೋಗೀಶ್ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು.
ಜನಪ್ರಿಯ ಕಾಮಿಡಿ ಕಿಲಾಡಿಗಳಾದ ದಿವ್ಯಶ್ರೀ ಮೂಡುಗರೆ, ಸೂರ್ಯ ಕುಂದಾಪುರ, ಅಪ್ಪಣ್ಣ ಗಾಣಿಗೇರ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಅಚ್ಲಾಡಿ ಸ್ವಾಗತಿಸಿ, ಕಾರ್ತಿಕ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಅನಂತರ ಕಾಮಿಡಿ ಕಿಲಾಡಿಗಳು ತಂಡದಿಂದ ಪ್ರದರ್ಶನ ಹಾಗೂ ಸಂಗೀತ ರಸಮಂಜರಿ ನಡೆಯಿತು.