ಪುತ್ತೂರು: ಹರ್ಷ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಅವಘಡ; ಕೋಟ್ಯಂತರ ರೂ ನಷ್ಟ

ಪುತ್ತೂರು: ಇಲ್ಲಿನ ಹೆಸರಾಂತ ಗೃಹಪಯೋಗಿ ಉಪಕರಣ ಮಾರಾಟ ಮಳಿಗೆ ಹರ್ಷ ಶೋ ರೂಂ ನ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ನಸುಕಿನ ಜಾವ ದರ್ಭೆ ಎಂಬಲ್ಲಿ ನಡೆದಿದೆ.

ಪುತ್ತೂರು – ದರ್ಭೆ ಮುಖ್ಯ ರಸ್ತೆಯಲ್ಲಿರುವ ಸಂತೃಪ್ತಿ ಹೋಟೇಲ್‌ ನ ಹಿಂಭಾಗ ಹರ್ಷಾ ಶೋ ರೂಂ ನ ಗೋದಾಮಿನಲ್ಲಿ ಕೋಟ್ಯಂತರ ಮೌಲ್ಯದ ಎಲೆಕ್ಟ್ರಾನಿಕ್ಸ್‌ ಹಾಗೂ ಗೃಹಪಯೋಗಿ ವಸ್ತುಗಳನ್ನು ಶೇಖರಿಸಿಡಲಾಗಿತ್ತು. ಇಂದು ನಸುಕಿನ ಜಾವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನ ಒಳಗಿದ್ದ ವಸ್ತುಗಳು ಹೊತ್ತಿ ಉರಿಯುತ್ತಿದ್ದ ತೀವ್ರತೆಗೆ ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಚಿಮ್ಮಿ ಆತಂಕ ಸೃಷ್ಟಿಸಿದ್ದವು.

ತಕ್ಷಣವೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತು ವ್ಯವಸ್ತೆ ಮಾಡಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.