ಕಾಂಗ್ರೆಸ್ ನಾಯಕ ಡಿಕೆಶಿ ಹೆಲಿಕಾಪ್ಟರ್ ಭೂಸ್ಪರ್ಶ ಸಂದರ್ಭ ಹೆಲಿಪ್ಯಾಡ್ ನಲ್ಲಿ ಆಕಸ್ಮಿಕ ಬೆಂಕಿ

ಕಾರವಾರ: ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್‌ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗಮಿಸುತಿದ್ದಂತೆ ಹೆಲಿಕಾಪ್ಟರ್‌ಗೆ ಸಿಗ್ನಲ್ ನೀಡುವ ಸ್ಮೋಕ್ ಕ್ಯಾಂಡಲ್‌ನಿಂದ ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಗುರುವಾರ ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿದ್ದು ಈ ಸಭೆಗೆ ಡಿಕೆಶಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಈ ಸಂದರ್ಭ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಇತ್ತೀಚೆಗಷ್ಟೇ ಜಕ್ಕೂರಿನಿಂದ ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಮುಂದಿನ ಗಾಜು ಪುಡಿ ಪುಡಿಯಾಗಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ಹೆಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇದೀಗ  ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಬೇಕಿದ್ದ ಸ್ಥಳದ ಪಕ್ಕದಲ್ಲಿ ಆಕಸ್ಮಿಕವಾಗಿ ಹುಲ್ಲಿಗೆ ಬೆಂಕಿ ತಗುಲಿದೆ.