ಮಂಗಳೂರು: ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ತಮ್ಮ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದಿಂದ ಬರುವ ಹಣವನ್ನು ಪೂರಕವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಹದಗೆಟ್ಟಿದೆ. ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಈ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನ ಬಿಡುಗಡೆ ಆಗಿರುವುದಾಗಿ ನಮೂದಿಸಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇನ್ನೂ ದೊರೆತಿಲ್ಲ. ಸರಕಾರವು ಈ ವಿಷಯದ ಕುರಿತು ತುರ್ತು ಗಮನ ಹರಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನದ ಹಣವನ್ನು ಬಿಡುಗಡೆಗೊಳಿಸಬೇಕಾಗಿ ಹಾಗೂ ಈ ವಿದ್ಯಾರ್ಥಿವೇತನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸೂಕ್ತ ತನಿಖೆ ನಡೆಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿದೆ.
ಎನ್.ಇ.ಪಿ ಜಾರಿಯಾದ ನಂತರ ‘ಯು ಯು ಸಿ ಎಮ್ ಎಸ್’ ತಂತ್ರಾಂಶವನ್ನು ಬಳಸಿ ದಾಖಲಾತಿಯಿಂದ ಫಲಿತಾಂಶದವರೆಗೆ ಎಲ್ಲಾ ರೀತಿಯ ಮಾಹಿತಿಗಳನ್ನು ವಿಶ್ವವಿದ್ಯಾನಿಲಯಗಳು ಇದರ ಮೂಲಕವೇ ನಮೂದಿಸಬೇಕಾಗಿದೆ. ಆದರೆ ಈ ತಂತ್ರಾಂಶದಲ್ಲಿರುವ ಕೆಲವು ಸಮಸ್ಯೆಗಳಿಂದಾಗಿ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ. ವಿಶ್ವವಿದ್ಯಾಲಯಗಳು ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ನೀಡದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿ ಸಮೂಹ ಎದುರಿಸುತ್ತಿದ್ದು ಈ ಕೂಡಲೇ ಅವುಗಳನ್ನು ಬಗೆಹರಿಸುವಂತೆ ವಿದ್ಯಾರ್ಥಿಗಳೆಲ್ಲಾ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಹೋರಾಟದ ನೇತೃತ್ವವನ್ನು ಅಭಾವಿಪ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ ವಹಿಸಿದ್ದರು.