ಪದವಿ ಫಲಿತಾಂಶ ಮತ್ತುಅಂಕಪಟ್ಟಿ ಸಮಸ್ಯೆ: ಮಂಗಳೂರು ವಿವಿಗೆ ಮುತ್ತಿಗೆ ಹಾಕಿದ ಎಬಿವಿಪಿ ಕಾರ್ಯಕರ್ತರು

ಮಂಗಳೂರು: ಎಬಿವಿಪಿ ಮಂಗಳೂರು ವತಿಯಿಂದ ಮಂಗಳೂರು ವಿಶ್ವ ವಿದ್ಯಾಲಯದ ಫಲಿತಾಂಶ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಕಾರ್ಯಕರ್ತರು ನಮಗೆ ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿದ್ದಾರೆ.

Image

ವಿದ್ಯಾರ್ಥಿಗಳ ಫಲಿತಾಂಶ ಬರಲು ವಿಳಂಬವಾಗಿದೆ, ಅಂಕಪಟ್ಟಿಯೂ ಬಂದಿಲ್ಲ. ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗುತ್ತಿದೆ. ಫಲಿತಾಂಶ ಬಾರದಿದ್ದರೂ ಕಾಲೇಜು ಶುಲ್ಕ ವಸೂಲಾತಿ ಮಾಡಲಾಗಿದೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಇದಕ್ಕೆ ನೇರವಾಗಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಬೇಜವಾಬ್ದಾರಿಯ ನಡವಳಿಕೆಯೆ ಹೊಣೆ ಎಂದು ಎಬಿವಿಪಿ ಕಳೆದ ಕೆಲವು ದಿನಗಳಿಂದ ಆರೋಪಿಸುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಸಚಿವರು ಮತ್ತು ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ.

ಇದೀಗ 500 ಹೆಚ್ಚು ಎಬಿವಿಪಿ ಕಾರ್ಯಕರ್ತರು ಮಂಗಳೂರಿನ ಕೊಣಾಜೆಯಲ್ಲಿರುವ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ನಿರತರ ಮತ್ತು ಪೊಲೀಸರ ಮಧ್ಯೆ ಚಕಮಕಿ ನಡೆದಿದೆ. ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್ ಧರ್ಮ ಮತ್ತು ಕುಲಪತಿ ಪಿ.ಎಸ್ ಯಡಪಡಿತ್ತಾಯ ಆಗಮಿಸಿದ್ದು ಅಂಕಪಟ್ತಿ ನೀಡುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

Image