ಸೌಜನ್ಯ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಆಗ್ರಹಿಸಿ ಎಬಿವಿಪಿ ವತಿಯಿಂದ ಸಭೆ

ಉಡುಪಿ: ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಸಭೆ ನಡೆಸಲಾಯಿತು.

ನಗರದ ಹೃದಯ ಭಾಗವಾದ ಬೋರ್ಡ್ ಶಾಲಾ ಮೈದಾನದಲ್ಲಿ 11 ಗಂಟೆಗೆ ಸಭೆ ಸೇರಿ ಮೊದಲಿಗೆ ಮೌನಾಚರಣೆಯನ್ನು ನಡೆಸಿ ನಂತರ ಎಬಿವಿಪಿ ತಾಲೂಕು ಸಂಚಾಲಕ ಅಜಿತ್ ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿ, 11 ವರ್ಷಗಳ ಹಿಂದೆ ಸೌಜನ್ಯ ಪ್ರಕರಣ ನಡೆದಾಗ ಪ್ರಥಮ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಪ್ರಕರಣದ ಗಂಭೀರತೆಯನ್ನು ಸರಕಾರಕ್ಕೆ ಮತ್ತು ಸಮಾಜದಲ್ಲಿ ತಿಳಿಸಿ ಸಿಬಿಐ ತನಿಖೆ ಕೈಗೆತ್ತಿಕೊಳ್ಳುವವರೆಗೆ ಅ.ಭಾ.ವಿ.ಪ ಹೋರಾಟವನ್ನು ನಡೆಸಿತ್ತು ಎಂದರು.

ನಂತರ ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ ಸೌಜನ್ಯ ಪ್ರಕರಣದ ಕುರಿತು ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಉತ್ತರಿಸುತ್ತಾ ಈಗಾಗಲೇ ಹೇಳಿದಂತೆ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕಾದರೆ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸೌಜನ್ಯ ಕುಟುಂಬದವರು ಇಲ್ಲವೇ ಸಿಬಿಐ ತನಿಖಾ ತಂಡ ಹಾಗೂ ರಾಜ್ಯ ಸರ್ಕಾರ ಸಲ್ಲಿಸಬೇಕು. ಈ ಕುರಿತು ವಿಚಾರದ ಗಂಭೀರತೆಯನ್ನು ಅರಿತು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಹಾಕಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಇದೆ ರೀತಿ ದ್ವಂದ್ವ ದ್ವೇಷ ಆವೇಶದ ವಾತಾವರಣವು ಹೀಗೆ ಮುಂದುವರಿಯುವುದು ಎಂದು ಹೇಳಿದರು.

ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಸಂಬಂಧಿಸಿದ ವ್ಯಕ್ತಿ, ಸಂಸ್ಥೆ ಮುಖ್ಯವಾಗಿ ಸರ್ಕಾರ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡುವುದರ ಮೂಲಕ ಮಾಡಬೇಕು ಎಂದು ಎಬಿವಿಪಿ ಈ ಸಭೆಯ ಮೂಲಕ ಆಗ್ರಹಿಸಿತು.

ಈ ಸಭೆಯಲ್ಲಿ ನಗರ ಸಹ ಕಾರ್ಯದರ್ಶಿ ಕಾರ್ತಿಕ್, ಭಾವನಾ, ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ, ಕೃತಿ, ನಗರ ಹೋರಾಟ ಪ್ರಮುಖ್ ಭೂಷಣ್, ಪ್ರಸನ್ನ ಮತ್ತು ಪ್ರಮುಖರಾದ ಮಂಗಳಗೌರಿ, ಮನು,ಶಶಾಂಕ್,ಸ್ವಸ್ತಿಕ್,ನವೀನ್,ಪ್ರದೀಪ್, ಅನೀಶ್,ಸಂದೀಪ್, ಶ್ರೀಹರಿ ಮತ್ತು 200ಕ್ಕೂ ಹೆಚ್ಚು ಸದಸ್ಯರಿದ್ದರು.