ಅಭಿನಂದನ್ ತೋರಿದ ಸಾಹಸದಿಂದ ದೇಶದ ಗೌರವ ಹೆಚ್ಚಿದೆ: ಪೇಜಾವರ ಶ್ರೀ

ಉಡುಪಿ: ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಶತ್ರು (ಪಾಕಿಸ್ತಾನ) ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವವನ್ನು ಹೆಚ್ಚಿಸಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿನಂದನ್ ಜೇಬಲ್ಲಿದ್ದ ಭದ್ರತೆಗೆ ಸಂಬಂಧಿಸಿದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ. ಅವರು ಸಾಹಸಕ್ಕೆ ಪ್ರತಿಯೊಬ್ಬ ಭಾರತೀಯರು ಸೆಲ್ಯೂಟ್ ಹೊಡೆಯಬೇಕು. ಅವರಿಗೆ ಸಾವಿರ ಸಾವಿರ ಅಭಿನಂದನೆಗಳು ಎಂದರು.
ಯುದ್ಧ ಬೇಡ:
ಪಾಕಿಸ್ತಾನದ ಜೊತೆ ಯುದ್ಧ ಬೇಡ, ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆ. ನಮ್ಮ ಸೈನಿಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತವೆ. ಹಾಗಾಗಿ ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದು ಮನವಿ ಮಾಡಿದರು.
ಮೋದಿಗೆ ಅಭಿನಂದನೆ: 
ಪ್ರಧಾನಿ ಮೋದಿಗೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಅಭಿವೃದ್ಧಿ ನಿಲುವು ಮತ್ತು ಧೈರ್ಯ, ದಿಟ್ಟತನವನ್ನು ನಾನು ಮೆಚ್ಚುತ್ತೇನೆ. ಅವರು ಸೂಕ್ತ ಸಮಯದಲ್ಲಿ ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.
ಉಗ್ರರನ್ನು ಹುಡುಕಿ ಕೊಲ್ಲಬೇಕು: 
ದೇಶದ ಭದ್ರತೆಗೆ ಕಂಟಕವಾಗಿರುವ ಹಾಗೂ ನಮ್ಮ ದೇಶದ ಯೋಧರು, ಜನರನ್ನು ಬಲಿ ಪಡೆಯುತ್ತಿರುವ ಉಗ್ರರನ್ನು ಹುಡುಕಿ ಕೊಲ್ಲಬೇಕು. ಉಗ್ರರ ಸಂಹಾರ ಅಗತ್ಯವಾಗಿ ಆಗಬೇಕು. ಅಮಾಯಕರ ಹತ್ಯೆ ಆಗದಂತೆ ಎಚ್ಚರವಹಿಸಬೇಕು. ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗೆ ಅಭಿನಂದಿಸುತ್ತೇನೆ ಎಂದರು.
ಬಿಎಸ್ ವೈ ಹೇಳಿಕೆ ಚಿಕ್ಕ ವಿಚಾರ:
ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವ ವಿಚಾರ ಬಹಳ ಚಿಕ್ಕದು. ಇದು ದೊಡ್ಡ ವಿಷಯವಲ್ಲ. ಇಂದಿರಾಗಾಂಧಿ ಆಳ್ವಿಕೆ ಸಂದರ್ಭ ಯುದ್ಧ ನಡೆದಾಗ ಕಾಂಗ್ರೆಸ್ ಗೆ ಲಾಭ ಆಗುತ್ತದೆ ಅಂಥಾ ಎಲ್ಲರು ಹೇಳಿಕೊಂಡಿದ್ದರು. ಹಾಗಾಗಿ
ಬಿಎಸ್ ವೈ ಹೇಳಿಕೆಯನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ ಎಂದು ತಿಳಿಸಿದರು.
ಬುದ್ಧಿಜೀವಿಗಳಿಗೆ ದೇಶಾಭಿಮಾನ ಇಲ್ಲ:
ದೇಶದ ಸೈನಿಕರು ಉಗ್ರರ ಸಂಹಾರ ಮಾಡುತ್ತಿರುವುದು ದೇಶದ ಬುದ್ಧಿಜೀವಿಗಳಿಗೆ  ತಿರಸ್ಕಾರ ಮನೋಭಾವ ಉಂಟಾಗಿದೆ. ಇಂತಹ ಸಂದರ್ಭದಲ್ಲೂ ಅವರಿಗೆ ದೇಶಾಭಿಮಾನ ಇಲ್ಲ. ಬುದ್ಧಿಜೀವಿಗಳಿಗೆ ದೇವರು ಒಳ್ಳೆ ಬುದ್ದಿ ಕೊಡಬೇಕು. ಅವರು ದುರ್ಬುದ್ಧಿ ಜೀವಿಗಳು ಆಗಬಾರದು. ಬುದ್ಧಿಜೀವಿಗಳಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಯೋಧರಷ್ಟು ಶ್ರಮ ವೇದನೆ ಪಡುವವರು ಯಾರೂ ಇಲ್ಲ:
ನಾನು ನಿನ್ನೆ ಉರಿ ಸಿನೆಮಾ ನೋಡಿದೆ. ಸೈನಿಕರ ಬಗ್ಗೆ ಬಹಳ ಅಭಿಮಾನ ಗೌರವ ಬೆಳೆಯಿತು. ಸಿನೆಮಾ ಯೋಧರ ಕೆಲಸದ ಚಿತ್ರಣ ಸಿಕ್ಕಿತು. ಸರ್ಕಾರದ ಸಂಬಳ ಪಡೆಯುವವರು ಬಹಳ ಜನ ಇದ್ದಾರೆ. ಆದರೆ ಯೋಧರಷ್ಟು ಶ್ರಮ ವೇದನೆ ಪಡುವವರು ಯಾರೂ ಇಲ್ಲ. ಯೋಧರು ಜೀವನವನ್ನೇ ದೇಶದ ಜನಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.