ಕುಂದಾಪುರ: ತಾಲೂಕು ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಪಡಿತರ ಚೀಟಿದಾರರಿಗೆ ವಿಶೇಷ ಪಡಿತರವನ್ನು ಸರಕಾರ ಆದೇಶದಂತೆ ವಿತರಿಸಲಾಯಿತು.
ಸರಕಾರವು ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ನೀಡುವಂತೆ ಆದೇಶ ನೀಡಿದ್ದು ಅದರಂತೆ ಸಂಘದ ಅಧ್ಯಕ್ಷರಾದ ಹರ್ಕೂರು ಮಂಜಯ್ಯ ಶೆಟ್ಟಿಯವರು ಎಪ್ರಿಲ್ ೨ ರಂದು ವಿಶೇಷ ಮುತುವರ್ಜಿ ವಹಿಸಿ ಪಡಿತರ ವಿತರಿಸುವಂತೆ ನೋಡಿಕೊಂಡರು. ಇದೇ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ ಅಲ್ಲಲ್ಲೇ ಮಾಹಿತಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿವಂತೆ ಮನವಿ ಮಾಡಿದರು. ಅಲ್ಲದೆ ಮನೆಯಿಂದ ಹೊರಬಾರದಂತೆ, ಪೇಟೆಗಳಲ್ಲಿ ತಿರುಗಾಡದಂತೆ ಮನವಿ ಮಾಡಿ ಲಾಕ್ಡೌನ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಬೆಳಿಗ್ಗೆಯೇ ಪಡಿತರ ವಿತರಣೆ ಆರಂಭ ಮಾಡಿ ರಾತ್ರಿ ಒಂಬತ್ತು ಗಂಟೆವರೆಗೂ ಪಡಿತರ ವಿತರಿಸಿದರು. ಸಂಘದ ವ್ಯವಸ್ಥಾಪಕರಾದ ಸಂಜೀವ ಪೂಜಾರಿ ಪಡಿತರ ಕಾರ್ಡುದಾರರಿಗೆ ಯಾವುದೇ ಗೊಂದಲವಿಲ್ಲದೆ ಸಾಕಷ್ಟು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿದರು. ಪಡಿತರ ವಿತರಣೆಯಲ್ಲಿ ಎಲ್ಲ ಸಿಬ್ಬಂದಿಗಳು ಸಹಕರಿಸಿದರು.