ರಾಜ್ಯ:ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಶುಕ್ರವಾರದಿಂದ ಆರಂಭವಾಗಲಿದ್ದು, ಉಡುಪಿ ಜಿಲ್ಲೆ ಮತ್ತು ಮಲೆನಾಡಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆನ್ನುವ ಕಾಳಜಿಯಲ್ಲಿ ಶುಕ್ರವಾರದಿಂದ ಆರಂಭಗೊಳ್ಳಬೇಕಿದ್ದ ಆಗುಂಬೆ ರಸ್ತೆಯ ತುರ್ತು ಕಾಮಗಾರಿಯನ್ನು ಜಿಲ್ಲಾಡಳಿತ ಮುಂದೂಡಿದೆ.ದ್ವಿತೀಯ ಪಿಯುಸಿ, ಪರೀಕ್ಷೆಯ ಬಳಿಕವೇ ಕಾಮಗಾರಿಯನ್ನು ಶುರುಮಾಡುತ್ತೇವೆ ಎಂಬುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಬಿ.ಕೆ.ದಯಾನಂದ್ ತಿಳಿಸಿದ್ದಾರೆ. ಸದ್ಯಕ್ಕೆ ಘಾಟಿ ರಸ್ತೆ ದುರಸ್ಥಿ ಆರಂಭಗೊಂಡರೆ ಈ ಭಾಗದಲ್ಲಿರುವ, ಈ ರಸ್ತೆಯಲ್ಲಿಯೇ ದಿನೇ ದಿನೇ ಓಡಾಡುವ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ, ರಸ್ತೆ ಕಾಮಗಾರಿಯನ್ನು ಮಾ.19 ಬಳಿಕ ನೆರವೇರಿಸಲಾಗುವುದು,
ಈಗಾಗಲೇ ಈ ಕುರಿತು ಹೆದ್ದಾರಿ ಪ್ರಾಧಿಕಾರದ ಜೊತೆ ಮಾತು ಕತೆ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ. ತುರ್ತು ಕಾಮಗಾರಿ ಪ್ರಯುಕ್ತ ಆಗುಂಬೆ ಘಾಟಿ ವಾಹನ ಸಂಚಾರ ಮಾ.1 ರಿಂದ ಮಾ-31 ರವರೆಗೆ ಒಂದು ತಿಂಗಳ ಕಾಲ ಸ್ಥಗಿತಗೊಳ್ಳಲಿದೆ ಎಂದು ವಾರದ ಹಿಂದೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಕಾಮಗಾರಿಯನ್ನು ಮುಂದೂಡಬೇಕು ಎಂದು ಸಾರ್ವಜನಿಕರು,ವಿದ್ಯಾರ್ಥಿಗಳು ಕೋರಿದ್ದರು. ಇದೀಗ ಕಾಮಗಾರಿ ಮುಂದೂಡಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.