ಇನ್ನೂ ಆಗಿಲ್ಲ ಆಗುಂಬೆ ಘಾಟ್ ಕಾಮಗಾರಿ ಪೂರ್ಣ: ಮೇ.15 ರ ವರೆಗೆ ವಾಹನ ಸಂಚಾರ ನಿಷೇಧ

ಉಡುಪಿ,: ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ 30 ರ ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆದರೆ ನಿಗದಿತ ಸಮಯದಲ್ಲಿ ಕಾಮಗಾರಿ ದುರಸ್ತಿ ಆಗದ ಕಾರಣ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಾಹನ ಸಂಚಾರ ನಿಷೇಧ ಆದೇಶವನ್ನು ಮೇ 15 ರ ವರೆಗೆ ವಿಸ್ತರಿಸಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

    ಈ ಅವಧಿಯಲ್ಲಿ ಸಾಮಾನ್ಯ ಬಸ್, ಜೀಪು, ವ್ಯಾನ್, ಎಲ್.ಸಿ.ವಿ(ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಉಡುಪಿ-ಕಾರ್ಕಳ-ಮಾಳಾಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ ಮಾರ್ಗವಾಗಿ ಹಾಗೂ ರಾಜಹಂಸ, ಐರಾವತ ಬಸ್ಸ್‍ಗಳು, ಖಾಸಗಿ ಲಕ್ಸುರಿ ಬಸ್‍ಗಳು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು ಉಡುಪಿ-ಕುಂದಾಪುರ-ಸಿದ್ಧಾಪುರ-ಹೊಸಗಂಡಿ- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.