ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಒಟ್ಟು 51 ಡೆಲ್ಟಾ ಪ್ಲಸ್ ಪ್ರಕರಣ ಪತ್ತೆ

ನವದೆಹಲಿ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಇಳಿಮುಖವಾಗುತ್ತಿದ್ದಂತೆ ಕೊರೊನಾ ರೂಪಾಂತರ ತಳಿ ‘ಡೆಲ್ಟಾ ಪ್ಲಸ್’ ವೈರಸ್ ನಿಧನವಾಗಿ‌ ಹರಡಲು ಶುರುವಾಗಿದೆ. ಕರ್ನಾಟಕ ರಾಜ್ಯ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ‘ಡೆಲ್ಟಾ ಪ್ಲಸ್’ ಸೋಂಕು ದೃಢಪಟ್ಟಿದೆ.

ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಕೇರಳ, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಹರಿಯಾಣ ಮತ್ತು ಜಮ್ಮು–ಕಾಶ್ಮೀರದಲ್ಲಿ ಒಟ್ಟು 51 ‘ಡೆಲ್ಟಾ ಪ್ಲಸ್’ ಪ್ರಕರಣಗಳು ಪತ್ತೆಯಾಗಿದೆ. ಈ ಪ್ರಕರಣಗಳ ಬಗ್ಗೆ ಸೂಕ್ಷ್ಮವಾಗಿ ನಿಗಾ ವಹಿಸಿದ್ದೇವೆ ಎಂದು ನೀತಿ ಆಯೋಗ ತಿಳಿಸಿದೆ.

ಡೆಲ್ಟಾ ಪ್ಲಸ್ ಪತ್ತೆಯಾಗಿರುವ ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಹಾಗೂ ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಗಳನ್ನು ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಕಳೆದ ವಾರ ಕೇಂದ್ರ ಸೂಚಿಸಿತ್ತು.

ಡೆಲ್ಟಾ ಪ್ಲಸ್ ಹರಡುವ ಪ್ರಮಾಣ, ಅದರಿಂದುಂಟಾಗುವ ಸೋಂಕಿನ ತೀವ್ರತೆ ಬಗ್ಗೆ ವೈಜ್ಞಾನಿಕ ದತ್ತಾಂಶಗಳಿಲ್ಲ. ಈಗಾಗಲೇ ನೀಡಲಾಗುತ್ತಿರುವ ಲಸಿಕೆಗಳು ಈ ರೂಪಾಂತರದ ವಿರುದ್ಧ ಪರಿಣಾಮಕಾರಿಯೇ ಎಂಬುದನ್ನು ತಿಳಿಯಲು ವೈಜ್ಞಾನಿಕ ಅಧ್ಯಯನ ನಡೆಯುತ್ತಿದೆ ಎಂದು ಆಯೋಗ ಹೇಳಿದೆ.

ಈ ವೈರಸ್ ಹೆಚ್ಚು ಹರಡುವ ಸಾಧ್ಯತೆ, ಶ್ವಾಸಕೋಶಕ್ಕೆ ಹೆಚ್ಚಿನ ಹಾನಿ ಮಾಡಬಲ್ಲ ಸಾಮರ್ಥ್ಯ, ಲಸಿಕೆ ಪಡೆದ ಬಳಿಕವೂ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ‘ಡೆಲ್ಟಾ ಪ್ಲಸ್’ ಹೆಚ್ಚು ಕಳವಳಕಾರಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.