ತಮಿಳುನಾಡಿನಲ್ಲಿ ಇದು ರಾಜ್ಯಪಾಲರು ಪಟ್ಟು ಹಿಡಿದ ಲೆಕ್ಕಾಚಾರ .ಆದರೆ ಯಾವುದೆ ಪಕ್ಷಕ್ಕೂ ಸರಳ ಸಂಖ್ಯೆಯ ಬಹುಮತವಿಲ್ಲದ ಕಾರಣ ಇದ್ದುದರಲ್ಲಿಯೇ ಹೆಚ್ಚಿನ ಸಂಖ್ಯೆ ಗಳಿಸಿರುವ ಟಿವಿಕೆ ಪಕ್ಷದ ಹೀರೊ ವಿಜಯ್ ಆ ಕಡೆಗೂ ಸಲ್ಲುವ ಈ ಕಡೆಗೂ ಸಲ್ಲುವ ಕಾಂಗ್ರೆಸ್ನ ಐದು ಅಂಕೆಗಳನ್ನು ತನ್ನ ಲೆಕ್ಕಕ್ಕೆ ಸೇರಿಸಿಕೊಂಡು ನೂರೆಂಟು ಗಂಟನ್ನು ಹೆಗಲೇರಿಸಿಕೊಂಡು ಲೇೂಕ ಭವನವನ್ನು ಎರಡು ಬಾರಿ ಸುತ್ತಿ ಬಂದಿದ್ದಾರೆ.ಆದರೂ ತಮಿಳುನಾಡಿನ ರಾಜ್ಯಪಾಲರು ನನಗೆ 108 ಸಾಲದು 118 ಬೇಕು ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ.ಈಗ ಚಚೆ೯ಗೆ ಗ್ರಾಸವಾಗಿರುವುದು ರಾಜ್ಯಪಾಲರುಗಳ ಈ ನಿಲುವು ಸರಿವೊ? ತಪ್ಪೊ? ಅನ್ನುವ ಜಿಜ್ಞಾಸೆ.
*ಒಂದು ಅಥ೯ದಲ್ಲಿ ಸರಿ ಇನ್ನೊಂದು ಅಥ೯ದಲ್ಲಿ ತಪ್ಪು.ಯಾವ ದಿಕ್ಕಿನಲ್ಲಿ ನಿಂತು ತೀಪು೯ ನೀಡುತ್ತೀರಿ ಅನ್ನುವುದರ ಮೇಲೆ ಸರಿ ತಪ್ಪುಗಳ ದಶ೯ನ ವಾಗುತ್ತದೆ.ಇಲ್ಲಿ ನಮ್ಮ ಸಂವಿಧಾನವಂತು ತಟಸ್ಥ.ಇಲ್ಲಿ ಎಲ್ಲವನ್ನು ನಮ್ಮ ರಾಜ್ಯಪಾಲರುಗಳ ಪಾದರವೀಂದಗಳಿಗೆ ಸಮಪಿ೯ಸಲಾಗಿದೆ.
*ಒಂದು ಅಥ೯ದಲ್ಲಿ 108ಕ್ಕೆ ಒಪ್ಪಿಗೆ ಕೊಡದಿರುವುದು ಸರಿಯೇ.ಅವರೇನು ಒಪ್ಪಿಗೆ ಕೊಡುವುದಿಲ್ಲಂತ ಹೇಳಿಲ್ಲ.ಕನಿಷ್ಟ ಪಕ್ಷ ಸರಳ ಬಹುಮತದ ಸದಸ್ಯರ ಪಟ್ಟಿಯನ್ನು ನೀಡಿದರೆ ಸಾಕು.ಯಾವುದೆ ಸರಳ ಬಹುಮತಕ್ಕೆ ಯಾವುದೆ ಪುರಾವೆ ಇಲ್ಲದ ಅಲ್ಪ ಬಹುಮತದವರನ್ನು ಸರ್ಕಾರ ಕಟ್ಟಿ ಅನ್ನುವುದು ಯಾವ ನ್ಯಾಯ.ಒಂದು ವೇಳೆ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಮಾಡಿಕೊಟ್ಥರೆ ಬೇರೆ ಎಲ್ಲಾ ಅಡ್ಡ ದಾರಿಗಳಿಗೆ ತಾನೇ ಅವಕಾಶ ಮಾಡಿಕೊಟ್ಟಂತೆ ಆಗಬಹುದು ಅನ್ನುವ ವಾದವೂ ಅವರದ್ದಿರ ಬಹುದು.ಇದು ಸರಿಯೇ.ಹೊರಗಿನ್ನಿಂದ118 ಸದಸ್ಯರ ಪಟ್ಟಿ ಕೊಡಲಾರದ ತಾವು ಸದನದ ಒಳಗೆ ಅದು ಹೇಗೆ ಸಾಧ್ಯ ಅನ್ನುವ ವಾದವೂ ಸರಿ.
- ಇನ್ನೊಂದು ದೃಷ್ಟಿಯಿಂದ ನೇೂಡಿದರೆ ಈ ಎಲ್ಲಾ ಲೆಕ್ಕಾಚಾರಗಳ ಸರಿ ತಪ್ಪುಗಳ ಉತ್ತರವಿರುವುದು ರಾಜ್ಯಪಾಲರುಗಳ ಮುಷ್ಠಿಯೊಳಗೇನೆ.ಅಥಾ೯ತ ಈ ರಾಜ್ಯಪಾಲರುಗಳನ್ನು ತಮಗೆ ಬೇಕಂತೆ ಕುಣಿಸುವ ಕಪ್ಪಿ ಮುಷ್ಟಿ ಇರುವುದು ಕೇಂದ್ರ ಸರ್ಕಾರದಲ್ಲಿ ಅನ್ನುವುದು ಹಿಂದಿನಿಂದಲೂ ರಾಜ್ಯಗಳಿಗೆ ಕೇಂದ್ರ ನೀಡುತ್ತಾ ಬಂದ ಬಳುವಳಿ.
*ಅಲ್ಪ ಬಹುಮತದ ಪಕ್ಷಕ್ಕೆ ಸರ್ಕಾರ ಕಟ್ಟಿ ಬಹುಮತ ಸಾಬೀತು ಪಡಿಸಿ ಅಂದ ಉದಾಹರಣೆಗಳು ಸಾಕಷ್ಟಿವೆ.ಎಷ್ಟು ಸಮಯದಲ್ಲಿ ಬಹುಮತ ಪಡಿಸ ಬೇಕು ಅನ್ನುವ ಕುರಿತಾಗಿ ಹಿಂದೆ ಸಾಕಷ್ಟು ವಾದ ವಿವಾದ ನಡೆದದ್ದು ಇನ್ನೂ ನೆನಪಿದೆ.ನಮಗೆ ಹತ್ತಿರದವರಾದರೆ ತಿಂಗಳು ಗಟ್ಟಲೆ ಸಮಯ ನೀಡಿದ್ದು ಇದೆ.ಅದೇ ನಮಗೆ ದೂರದವರಾದರೆ ನಾಳೆ ಬೆಳಿಗ್ಗೇನೆ ಸದನದಲ್ಲಿ ಬಹುಮತ ಸಾಬೀತು ಪಡಿಸಿ ಅನ್ನುವ ಕಟ್ಟಪ್ಪಣೆ ಮಾಡಿದ್ದ ಪ್ರಸಂಗವೂ ಇದೆ.
ವಾಜಪೇಯಿಯವರು ಎರಡು ಬಾರಿ ಬಹುಮತದ ಕೊರತೆಯನ್ನು ಹೊತ್ತು ಕೊಂಡು ಸದನವನ್ನು ಎದುರಿಸಿದ ಘಟನೆಗಳು ನೆನಪಾಗುತ್ತದೆ.ಒಂದು ಸಂದರ್ಭದಲ್ಲಿ ಸದನದೊಳಗೆ ಬಹುಮತ ಯಾಚಿಸುವ ಕೊನೆಯ ಘಳಿಗೆಯಲ್ಲಿ ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯಿಡು ತಮ್ಮ ಪಕ್ಷದ ಬಾಹ್ಯ ಬೆಂಬಲ ನೀಡುವ ಘೇೂಷಣೆ ಮಾಡಿ ತಮ್ಮ ಪಕ್ಷದ ಬಾಲಯೇೂಗಿಯನ್ನು ಸ್ಪೀಕರ್ ಮಾಡಿಸಿಕೊಂಡ ಉದಾಹರಣೆ ಇನ್ನೂ ಜೀವಂತವಿದೆ.ಅದೇ ಇನ್ನೊಂದು ಬಾರಿ ವಾಜಪೇಯಿಯವರು ಬಹುಮತದ ಕೊರತೆ ಇದ್ದಾಗಲೂ ಸದನದಲ್ಲಿ ತಮ್ಮ ಕೊನೆಯ ಭಾಷಣ ಮಾಡಿ ರಾಜೀನಾಮೆ ಕೊಟ್ಟು ಹೊರಗೆ ಬಂದ ಉದಾಹರಣೆ ಕೂಡ ಇದೆ.
ಅಂದರೆ ಈ ಎಲ್ಲಾ ಸಂದರ್ಭದಲ್ಲಿ ಬಹುಮತವಿಲ್ಲದ ಸಂದರ್ಭದಲ್ಲಿ ರಾಷ್ಟ್ರಪತಿಗಳು/ರಾಜ್ಯಪಾಲರುಗಳು ಸರಳ ಬಹುಮತವಿಲ್ಲದ ಪಕ್ಷಗಳಿಗೂ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸರ್ಕಾರ ಕಟ್ಟಲು ಅವಕಾಶ ಮಾಡಿಕೊಟ್ಟ ಸಾಕಷ್ಟು ಉದಾಹರಣೆಗಳು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಡೆದಿದೆ.
*ತಮಿಳುನಾಡಿನ ರಾಜ್ಯಪಾಲರುಗಳು ಸೂಕ್ಷ್ಮತೆಯ ರಾಜಕೀಯ ನಡೆನೇೂಡಿದಾಗ ನಾನು ಅಥ೯ ಮಾಡಿಕೊಂಡಿದ್ದು ಏನೆಂದರೆ ಒಂದು ವೇಳೆ ಇದೇ ಟಿವಿಕೆ ವಿಜಯ ಕೇವಲ ತಮ್ಮ ಪಕ್ಷದ 104 ಸದಸ್ಯರ ಪಟ್ಟಿಯನ್ನು ಪ್ರಾಮಾಣಿಕವಾಗಿ ನೀಡಿದ್ದರೆ ರಾಜ್ಯಪಾಲರು ಒಪ್ಪಿಗೆ ನೀಡುತ್ತಿದ್ದರೇನೊ? ಆದರೆ ಇಲ್ಲಿ ಕಾಂಗ್ರೆಸ್ ಪಕ್ಷ ಮೂಗು ತುರುಕಿಸಿ ಎ.ಐ.ಡಿ.ಎಂ.ಕೆ.ಯ ಬಣ ಒಡೆದು ಅದರಲ್ಲೂ ಬಿಜೆಪಿಯನ್ನು ಮೂಲೆ ಗುಂಪು ಮಾಡುವ ರಣತಂತ್ರಕ್ಕೆ ಕಾಂಗ್ರೆಸ್ ಪಕ್ಷ ವಿಜಯ್ ರವರನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾದ ಕಾರಣದಿಂದಲೇ ಕೇಂದ್ರ ಬಿಜೆಪಿ ನಾಯಕರುಗಳು ರಾಜ್ಯಪಾಲರನ್ನು ಒಂದು ಗಾಳವಾಗಿ ಬಳಸಿಕೊಂಡಿದ್ದಾರೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ರಾಜಕೀಯ ಬೆಳವಣಿಗೆ..ಅಷ್ಟೇ :>ವಿಶ್ಲೇಷಣೆ /:ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

















