ಚಂಡೀಗಢ: ಪಂಜಾಬ್ನ ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಮೆಡಿಕಲ್ ಶಾಪ್ ಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೆಡಿಕಲ್ ಶಾಪ್ನಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಫೇಸ್ಬುಕ್ನಲ್ಲಿ ನೇರಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಪರ್ವಿಂದರ್ ಸಿಂಗ್ ಝೋಟಾ ಅವರು ಮೆಡಿಕಲ್ ಶಾಪ್ನಲ್ಲಿ ನಶೆಯುಂಟುಮಾಡುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೇಸ್ಬುಕ್ ಲೈವ್ ಮಾಡುತ್ತಿದ್ದರು. ಈ ವೇಳೆ ಝೋಟಾ ಮತ್ತು ಅಂಗಡಿ ಮಾಲೀಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಂಗಡಿ ಮಾಲೀಕನ ಕೈಯಲ್ಲಿ ಪಿಸ್ತೂಲ್ ಇರುವುದನ್ನು ಗಮನಿಸಿದ ಝೋಟಾ, ಅದನ್ನು ಪ್ರಶ್ನಿಸಿ ಸವಾಲು ಹಾಕಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ಆಗ್ರಹಿಸಿ, ಪೊಲೀಸರಿಗೆ ಕರೆ ಮಾಡುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.
ಸುಮಾರು ನಾಲ್ಕು ನಿಮಿಷಗಳ ಕಾಲ ನಡೆದ ವಾಗ್ವಾದದ ಬಳಿಕ ಅಂಗಡಿ ಮಾಲೀಕ ಏಕಾಏಕಿ ಝೋಟಾ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗುಂಡೇಟು ತಗುಲುತ್ತಿದ್ದಂತೆ ಮೊಬೈಲ್ ಫೋನ್ ಕೆಳಗೆ ಬಿದ್ದಿದ್ದು, ಫೇಸ್ಬುಕ್ ನೇರಪ್ರಸಾರ ಸ್ಥಗಿತಗೊಂಡಿದೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಫೇಸ್ಬುಕ್ನಲ್ಲಿ 24 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಝೋಟಾ, ಕಳೆದ ಹಲವು ವರ್ಷಗಳಿಂದ ಮಾನ್ಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ದ್ರವ್ಯ ಹಾಗೂ ನಶೆಯುಂಟುಮಾಡುವ ಔಷಧಿಗಳ ಅಕ್ರಮ ಮಾರಾಟದ ವಿರುದ್ಧ ಹೋರಾಟ ನಡೆಸುತ್ತಿದ್ದರು.
2023ರ ಜುಲೈನಲ್ಲಿ ಮೆಡಿಕಲ್ ಶಾಪ್ವೊಂದರ ವಿವಾದಕ್ಕೆ ಸಂಬಂಧಿಸಿದಂತೆ ಝೋಟಾ ವಿರುದ್ಧ ಗಲಭೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅವರು ಎರಡು ತಿಂಗಳ ಜೈಲುವಾಸದ ಬಳಿಕ ಬಿಡುಗಡೆಯಾಗಿ, ತಮ್ಮ ಹೋರಾಟವನ್ನು ಮುಂದುವರಿಸಿದ್ದರು.
ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಹೋರಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತನ ಹತ್ಯೆ ಸ್ಥಳೀಯವಾಗಿ ಆತಂಕ ಮೂಡಿಸಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.
ವಿಡಿಯೋ ನೋಡಲು ಕೆಳಗಿನ ಲಿಂಕ್ ಬಳಸಿ
https://www.facebook.com/watch/?v=1422870626044082















