ಉಪ್ಪಿನಂಗಡಿ: ಕೇರಳದಲ್ಲಿ ಸರ್ಕಾರವೇ ಲಾಟರಿಯನ್ನು ನಡೆಸುತ್ತಿದ್ದು, ಪ್ರತಿವರ್ಷದಂತೆ ಓಣಂ ಹಬ್ಬದಂದು ಬಂಪರ್ ಲಾಟರಿ ಆಯೋಜಿಸಿತ್ತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಒಂದು ಟಿಕೆಟ್ಗೆ 500 ರೂ. ನಿಗದಿ ಮಾಡಲಾಗಿತ್ತು. ಸೆ. 22ರಂದು ಪ್ರಕಟವಾದ ಫಲಿತಾಂಶದಲ್ಲಿ ತಮಿಳುನಾಡಿನ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ.
ಈ ಓಣಂ ಲಾಟರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನ ಇಳಂತಿಲ ನಿವಾಸಿ ಚಂದ್ರಯ್ಯ ಎಂಬ ಮೇಸ್ತ್ರಿಯೊಬ್ಬರು ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಓಣಂ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಚಂದ್ರಯ್ಯ 50 ಲಕ್ಷ ರೂ. ಬಹುಮಾನ ಗೆದ್ದು ಸುದ್ದಿಯಾಗಿದ್ದಾರೆ.
ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ 500 ರೂ. ಕೊಟ್ಟು ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಇದೀಗ ಬಂಪರ್ ಬಹುಮಾನ ಬಂದಿದೆ.
ಈ ಹಿಂದೆ ಇದೇ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿ ಆನಂದ ಟೈಲರ್ ಲಾಟರಿ ಖರೀದಿ ಮಾಡಿದ್ದು, ಅವರಿಗೆ 80 ಲಕ್ಷ ಬಹುಮಾನ ಬಂದಿತ್ತು. ಇದೀಗ ಮತ್ತೊಮ್ಮೆ ಈ ಭಾಗದ ವ್ಯಕ್ತಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ.