ಫೋಟೋ ಕೃಪೆ : ಪ್ರಥಮ್ ಕಾಮತ್
ಉಡುಪಿ: ತಿರುಪತಿ ತಿರುಮಲ ದೇವಸ್ಥಾನ ಸಮಿತಿ ವತಿಯಿಂದ ಕೆ.ಕೃಷ್ಣಮೋಹನ್ ಪೈ ಯುಎಸ್ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರಿಂದ ಕಟಪಾಡಿಯಲ್ಲಿ ಶನಿವಾರ ಎಸ್‌ವಿ ಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವರೆಗೆ ಶೋಭಾಯಾತ್ರೆಯಲ್ಲಿ ಬಂದ ದೇವರನ್ನು ತಿರುಪತಿಯಿಂದಲೇ ಬಂದ ವೈದಿಕ ವೃಂದವರ ನೇತೃತ್ವ ದಲ್ಲಿ ಕಲ್ಯಾಣ ಮಂಟಪದಲ್ಲಿ ಸರ್ವಾಲಂಕಾರ ಪೂರ್ವಕ ಸ್ಥಾಪಿಸಿ, ಕಲ್ಯಾಣೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣ ಮಣೆ ಬಂಧನ, ಮುಹೂರ್ತ ನಿರೀ ಕ್ಷಣೆ, ಮಾಲಾಧಾರಣೆ ನಡೆದು ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀನಿವಾಸ ದೇವರಿಗೆ ಪದ್ಮಾವತಿ ದೇವಿಯ ಕನ್ಯಾದಾನ ಮಾಡುವ ಮೂಲಕ ಕಲ್ಯಾಣೋ ತ್ಸವ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿತರಣೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಕಲ್ಯಾಣೋತ್ಸವ ಸೇವಾದಾರರಾದ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ, ಕೆ.ಕೃಷ್ಣಮೋಹನ್ ಪೈ, ಕೆ.ಸತ್ಯೇಂದ್ರ ಪೈ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಪುತ್ತಿಗೆ ಮಠದ ಗೋಪಾಲ ಆಚಾರ್ಯ ತೆಲುಗುನಿಂದ ಕನ್ನಡಕ್ಕೆ ಭಾಷಾಂತರ ಮಾಡಿದರು.



ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ ಕೊಡ್ಡಿ, ವೇದವ್ಯಾಸ ಕಾಮತ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಟ್ಟಾರು ದಿನೇಶ್ ಕಿಣಿ, ಧರ್ಮಸ್ಥಳ ಗಾಮಾ ಭಿವೃದ್ಧಿ ಯೋಜನೆ ಮಮತಾ ಶೆಟ್ಟಿ, ಚಿತ್ರನಟ ರಮೇಶ್ ಭಟ್, ವಾಸುದೇವ ಕಾಮತ್, ಟಿ.ಸಚಿನ್ ಪೈ ಮಣಿ ಪಾಲ, ಜಯಕರ ಶೆಟ್ಟಿ ಇಂದ್ರಾಣಿ, ವಿದ್ಯಾವರ್ಧಕ ಸಂಘದ ಸದಸ್ಯರು ನಾನಾ ದೇವಸ್ಥಾನಗಳು, ದೈವಸ್ಥಾನ ಗಳು, ಭಜನಾ ಮಂದಿರಗಳ ಅರ್ಚಕರು, ಪದಾಧಿಕಾರಿ ಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಹರಿದು ಬಂದ ಭಕ್ತ ಸಾಗರ
ಕಲ್ಯಾಣೋತ್ಸವದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತಾಭಿಮಾನಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಶಿಸ್ತುಬದ್ಧವಾಗಿ ಕುಳಿತು ತಿರುಪತಿ ಶ್ರೀ ವೆಂಕಟೇಶ್ವರ ಕಲ್ಯಾಣೋತ್ಸವವನ್ನು ಕಣ್ಣುಂಬಿ ಕೊಂಡರು.





















