ಕುಂದಾಪುರ: ಉಳ್ಳೂರು-74 ಗ್ರಾಮದ ಯಡಹಕ್ಲು ಪ್ರದೇಶದಲ್ಲಿ ಆರು ತಿಂಗಳ ಹಿಂದೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಹೆಣ್ಣು ಚಿರತೆಯೊಂದು ಬಿದ್ದಿದ್ದು ಗ್ರಾಮಸ್ಥರಲ್ಲಿ ಮೂಡಿದ್ದ ಆತಂಕಕ್ಕೆ ತೆರೆ ಬಿದ್ದಿದೆ.
ಕಳೆದ ಹಲವು ತಿಂಗಳಿಂದ ಯಡಹಕ್ಲು ಸುತ್ತಮುತ್ತ 2–3 ಚಿರತೆಗಳು ರಾತ್ರಿ ವೇಳೆ ಸಂಚರಿಸುತ್ತಿದ್ದವು. ಇದರಿಂದ ಜನರು ಭಯಭೀತರಾಗಿದ್ದು, ಸ್ಥಳೀಯ ನಿವಾಸಿ ರತ್ನಾಕರ ನಾಯ್ಕ ಅವರು ಸಾಕಿದ್ದ ಕೋಳಿಗಳು ಹಾಗೂ ಸಾಕು ನಾಯಿಗಳು ಚಿರತೆಯ ಬಲಿಯಾಗಿದ್ದವು.
ಈ ಹಿನ್ನೆಲೆಯನ್ನು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅವರ ಮನೆಯ ಅಂಗಳದ ಕೋಳಿ ಗೂಡಿನ ಪಕ್ಕದಲ್ಲಿ ಬೋನನ್ನು ಅಳವಡಿಸಲಾಗಿತ್ತು. ಶುಕ್ರವಾರ ರಾತ್ರಿ ಚಿರತೆಯೊಂದು ಬೋನಿಗೆ ಸಿಕ್ಕಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಶಂಕರನಾರಾಯಣ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ವನರಕ್ಷಕರಾದ ಜಾಹಿರ್ ಅಬ್ಟಾಸ್, ಕೃಷ್ಣಮೂರ್ತಿ, ರವಿ ಸೇರಿದಂತೆ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡರು.

















