ಕೋಟ: ಮೂರ್ತೆದಾರರ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 302 ಕೋಟಿ ರೂ. ವ್ಯವಹಾರ ನಡೆಸಿ ರೂ. 1.06 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 12 ಡಿವಿಡೆಂಡ್ನ್ನು ಸಂಘದ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಜರುಗಿದ ಸಂಘದ 33ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಘೋಷಿಸಿದರು.
ಸಂಘವು ಕೋಟ, ಬಾರ್ಕೂರು, ಸಾಸ್ತಾನ, ಕೊಕ್ಕರ್ಣೆ, ಉಡುಪಿ-ಪುತ್ತೂರು, ಹೂಡೆ ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯಲ್ಲಿ 6 ಬ್ಯಾಂಕಿಂಗ್ ಶಾಖೆಗಳನ್ನು ಹೊಂದಿದ್ದು, ಶೀಘ್ರ ಬ್ಯಾಂಕಿಂಗ್ ಸೇವೆ ನೀಡುತ್ತಿದೆ. ಸಂಘವು 13124 ಸದಸ್ಯರ ಬಲ ಹೊಂದಿದ್ದು ರೂ. 1.35 ಕೋಟಿ ಪಾಲು ಬಂಡವಾಳ, 71.32 ಕೋಟಿ ರೂ. ಠೇವಣಿ, 54.04 ಕೋಟಿ ರೂ, ಹೊರಬಾಕಿ ಸಾಲ ಇದ್ದು, ಸಂಘದಿಂದ ರೂ. 27.06 ಕೋಟಿ ವಿವಿಧ ಸಹಕಾರಿ ಸಂಘ ಹಾಗೂ ಬ್ಯಾಂಕ್ನಲ್ಲಿ ವಿನಿಯೋಗಿಸಿದೆ. ಹಾಗೂ ವಿವಿಧ ನಿಧಿಗಳು ರೂ. 10.09 ಕೋಟಿ ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ 83.29 ಕೋಟಿಗೂ ಮೀರಿದೆ. ಸತತ 28 ವರ್ಷಗಳಿಂದ ‘ಎ’ ತರಗತಿ ಆಡಿಟ್ ವರ್ಗೀಕರಣ ಪಡೆದಿರುತ್ತದೆ.
ಸಂಘದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್, ಆರ್.ಟಿ.ಜಿ.ಎಸ್, ನೆಫ್ಟ್, ಇ-ಸ್ಟಾಂಪಿಂಗ್ ಸೌಲಭ್ಯ ಹಾಗೂ ಆರ್.ಟಿ.ಸಿ ವಿತರಿಸಲಾಗುತ್ತಿದೆ. ಸಂಘವು ಕೋಟದಲ್ಲಿ ಸ್ವಂತ ಸುಸಜ್ಜಿತ ಕೇಂದ್ರ ಕಛೇರಿ ಹಾಗೂ ವಾಣಿಜ್ಯ ಸಂಕೀರ್ಣ ಹೊಂದಿದ್ದು, ಸಂಘದ ಸಾಸ್ತಾನ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘವು ಮಹಿಳಾ ಸಶಕ್ತಿಕರಣಕ್ಕಾಗಿ 277 ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು ರೂ. 6.38 ಕೋಟಿ ಸಾಲ ಸೌಲಭ್ಯ ಒದಗಿಸಿದೆ.
ಸರಕಾರದ ಅನುದಾನದಿಂದ ಸಭಾಭವನ ನಿರ್ಮಾಣ :
ಸಂಘ ಕೇಂದ್ರ ಕಛೇರಿ ಕೋಟದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಸಂಪೂರ್ಣ ಹವಾನಿಯಂತ್ರಿತ ಸಭಾಭವನ ನಿರ್ಮಿಸಿದ್ದು ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಶಿಫಾರಸ್ಸಿನಂತೆ ರೂ. 50 ಲಕ್ಷ ಅನುದಾನ ದೊರೆತಿದ್ದು; ಸಭಾಭವನ ನಿರ್ಮಾಣ ಪೂರ್ಣಗೊಂಡಿರುತ್ತದೆ. ಸಂಘವು ರೂ. 8.50 ಕೋಟಿ ಸ್ಥಿರಾಸ್ತಿ ಮತ್ತು ಕಟ್ಟಡ, ರೂ. 5.10 ಕೋಟಿ ಚರಾಸ್ತಿ ಹೊಂದಿದ್ದು ಕೋಟದಲ್ಲಿ ಕೇಂದ್ರ ಕಛೇರಿಯ ಸ್ವಂತ ಕಟ್ಟಡ ರೂ. 4.00 ಕೋಟಿ ವೆಚ್ಚದಲ್ಲಿ ವಿಸ್ತರಣೆಗೊಂಡಿದ್ದು, ತಳಅಂತಸ್ತಿನ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ಸದ್ಯದಲ್ಲಿ ಉದ್ಘಾಟನೆಗೊಳ್ಳಲಿದೆ.
ಸಂಘದಿಂದ ಸದಸ್ಯರ ನೆರವು : ಸಂಘದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸದಸ್ಯರ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ವಿತರಣೆ, ಉನ್ನತ ವ್ಯಾಸಂಗ ನಿಧಿಯಿಂದ ಧನ ಸಹಾಯ, ಸಂಘದ ಸದಸ್ಯರಿಗೆ ಸಾಮೂಹಿಕ ವಿಮೆ, ಮರಣ ನಿಧಿ, ಸದಸ್ಯರ ಸಹಾಯಕ ನಿಧಿ ಮೂಲಕ ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಸಹಾಯಹಸ್ತ, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ. 1 ಲಕ್ಷ ವೈಯಕ್ತಿಕ ಸಾಲ ಹಾಗೂ ಸ್ವಸಹಾಯ ಗುಂಪಿನ ಸಾಲ ಪಡೆದ ಸದಸ್ಯರು ಮೃತರಾದಲ್ಲಿ ಬಾಕಿ ಸಾಲದ ಮೊತ್ತದ ಶೇಕಡಾ 25ರಷ್ಟನ್ನು ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲಾಗುತ್ತಿದೆ ಎಂದು ವಾರ್ಷಿಕ ಮಹಾಸಭೆಯ ವರದಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ತಿಳಿಸಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಯರಾಮ ಪೂಜಾರಿ ಬಾರ್ಕೂರು, ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಪಿ. ಕೃಷ್ಣ ಪೂಜಾರಿ ಪಾರಂಪಳ್ಳಿ, ನಿರ್ದೇಶಕರಾದ ಜಿ. ಸಂಜೀವ ಪೂಜಾರಿ ಕೋಡಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ ಬಾರ್ಕೂರು, ಕೃಷ್ಣ ಪೂಜಾರಿ ಪಿ ಕೋಡಿ ಕನ್ಯಾಣ, ಪ್ರಭಾವತಿ ಡಿ. ಬಿಲ್ಲವ ಕೋಟ, ಭಾರತಿ ಎಸ್. ಪೂಜಾರಿ ಕರಿಕಲ್ ಕಟ್ಟೆ, ಉಪಸ್ಥಿತರಿದ್ದರು. ಸಂಘದ ಬಾರ್ಕೂರು ಶಾಖಾ ವ್ಯವಸ್ಥಾಪಕಿ ಶ್ರೀದೇವಿ ಕಲ್ಕೂರ ಪ್ರಾರ್ಥಿಸಿದರು, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಕೃಷ್ಣ ವೇದಿಕೆಗೆ ಆಹ್ವಾನಿಸಿದರು, ಕೋಟ ಶಾಖೆಯ ವ್ಯವಸ್ಥಾಪಕ ದಿನೇಶ್ ಪೂಜಾರಿ ಬಾರ್ಕೂರು ಸ್ವಾಗತಿಸಿ, ಲೋಹಿತ್ ಜಿ. ಬಿ ವಂದಿಸಿದರು. ಶಾಖಾ ವ್ಯವಸ್ಥಾಪಕರುಗಳಾದ ಉದಯ ಪೂಜಾರಿ ಕೋಡಿ, ರಮೇಶ್ ಪೂಜಾರಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.