ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಬ್ರಹ್ಮಕುಂಭಾಭಿಷೇಕವು ಬುಧವಾರದಂದು ವಿವಿಧ ವಿಧಿ-ವಿಧಾನಗಳೊಂದಿಗೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತರಿಂದ ಜರಗಿತು.
ನೂತನವಾಗಿ ಶಿಲಾಮಯಗೊಂಡ ರಾಜಗೋಪುರವನ್ನು ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ತತ್ತರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಶ್ರೀ ಬ್ರಾಹ್ಮಿದುರ್ಗಪರಮೇಶ್ವರಿ ಅಮ್ಮನವರಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿಸಿ, ಅನಂತರ ತಮ್ಮ ಅಮೃತ ಹಸ್ತರಿಂದ ರಾಜಗೋಪುರವನ್ನು ಲೋಕಾರ್ಪಣೆಗೊಳ್ಳಿಸಿದರು.
ಆನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಗದ್ಗುರುಗಳಿಂದ ಅನುಗ್ರಹ ಭಾಷಣ ಮತ್ತು ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿದರು. ಧೂಳಿಪಾದಪೂಜೆ, ಸಂಘ ಸಂಸ್ಥೆಗಳಿಂದ ಜಗದ್ಗುರುಗಳಿಗೆ ಫಲಪುಷ್ಪ ಸಮರ್ಪಣೆ ನಡೆಯಿತು. ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ, ಸಹ ಮೊಕ್ತೇಸರ ಎ. ಚಂದ್ರಶೇಖರ ಶೆಟ್ಟಿ ಹೆನ್ನಾಬೈಲು, ಶೃಂಗೇರಿ ಪೀಠದ ಆಡಳಿತಾಧಿಕಾರಿ ಮುರಳಿ, ಪ್ರಾಂತ್ಯಾಧಿಕಾರಿ ಲೋಕೇಶ ಅಡಿಗ, ಪಂಚಾಂಗಕರ್ತರಾದ ಟಿ. ವಾಸುದೇವ ಜೋಯಿಸ ತಟ್ಟುವಟ್ಟು ಪ್ರಮುಖರಾದ ಕೃಷ್ಣನಂದ ಚಾತ್ರ, ಅನಿಲ್ ಚಾತ್ರ, ನಾಗರಾಜ ಚಾತ್ರ, ಮಠದ ಪ್ರಾಚಾರ್ಯರು ಅರ್ಚಕರು ದೇವಸ್ಥಾನದ ಅರ್ಚಕರು ಸಪ್ತ ಮಾಗಣಿಯವರು, ಭಕ್ತರು ಉಪಸ್ಥಿತರಿದ್ದರು.
ಎಸ್. ಸದಾನಂದ ಚಾತ್ರ ಸ್ವಾಗತಿಸಿದರು. ಶ್ರೀ ದುರ್ಗಾ ಮಹಿಳಾ ಬಳಗ ಪ್ರಾರ್ಥನೆ ಮಾಡಿದರು. ಎಸ್. ಸಚ್ಚಿದಾನಂದ ಚಾತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸುದೇವ ಜೋಯಿಸ ಕ್ಷೇತ್ರ ನುಡಿಗಳನಾಡಿದರು. ಸುಪ್ರೀತ ಚಾತ್ರ ವಂದಿಸಿದರು.