ನವದೆಹಲಿ: ಸುರ್ಗುಜಾ (ಛತ್ತೀಸ್ಗಢ): ಹಿರಿಯ ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ಅವರ ಮುಖ್ಯ ಸಲಹೆಗಾರ ಎಂದೇ ಬಿಂಬಿತವಾಗಿರುವ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಬಗ್ಗೆ ಬಿಜೆಪಿಯ ವಾಗ್ದಾಳಿಯನ್ನು ಮುನ್ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷವು ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ನ ಗ್ಯಾರಂಟಿಗಳನ್ನು ಪೂರೈಸಲು ಮಧ್ಯಮವರ್ಗದವರು ಹೆಚ್ಚಿನ ತೆರಿಗೆ ಪಾವತಿಸಲು ತಯಾರಾಗಿರಬೇಕು ಎನ್ನುವ ಹೇಳಿಕೆ ನೀಡಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಈ ದೇಶದಲ್ಲಿ ಸಾರ್ವಜನಿಕ ಸರ್ವೆ ನಡೆಸಿ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದರು.
ಈ ಹೇಳಿಕೆಗಳು ದೇಶಾದ್ಯಂತ ಭಾರೀ ಆಕ್ರೋಶವನ್ನು ಹುಟ್ಟುಹಾಕಿದ್ದು, ಪ್ರಧಾನಿ ಮೋದಿ ಇದರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್ಗಢದ ಸುರ್ಗುಜಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ನ ಅಪಾಯಕಾರಿ ಉದ್ದೇಶಗಳು ಒಂದೊಂದಾಗಿ ಬಹಿರಂಗವಾಗಿ ಹೊರಬರುತ್ತಿವೆ ಎಂದಿದ್ದಾರೆ.
“ಮಧ್ಯಮ ವರ್ಗದವರಿಗೆ ಹೆಚ್ಚು ತೆರಿಗೆ ವಿಧಿಸಬೇಕು ಎಂದು ಕಾಂಗ್ರೆಸ್ ರಾಜಮನೆತನದ ಯುವರಾಜನ ಸಲಹೆಗಾರ ಈ ಹಿಂದೆ ಹೇಳಿದ್ದರು. ಈಗ ಅವರು ಮುಂದೆ ಹೋಗಿದ್ದಾರೆ. ಈಗ ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದಾಗಿ ಹೇಳುತ್ತಿದೆ ಮತ್ತು ಜನರು ತಮ್ಮ ಪೋಷಕರಿಂದ ಪಡೆದ ಪಿತ್ರಾರ್ಜಿತವಾಗಿ ಬಂದ ಸಂಪತ್ತಿಗೆ ತೆರಿಗೆ ವಿಧಿಸುವುದಾಗಿ ಹೇಳುತ್ತಿದೆ” ಎಂದಿದ್ದಾರೆ.
“ನಿಮ್ಮ ಶ್ರಮದಿಂದ ನೀವು ಸಂಗ್ರಹಿಸುವ ಸಂಪತ್ತು ನಿಮ್ಮ ಮಕ್ಕಳಿಗೆ ವರ್ಗವಾಗುವುದಿಲ್ಲ. ಅದನ್ನು ಕಾಂಗ್ರೆಸ್ ಕೈ ಕಿತ್ತುಕೊಳ್ಳಲಿದೆ. ‘ನಿಮ್ಮ ಜೀವಿತಾವಧಿಯಲ್ಲಿ ಲೂಟಿ ಮಾಡಿ, ನಿಮ್ಮ ಸಾವಿನ ನಂತರವೂ ಲೂಟಿ ಮಾಡುವುದು’ ಕಾಂಗ್ರೆಸ್ನ ಮಂತ್ರವಾಗಿದೆ,” ಕಾಂಗ್ರೆಸ್ “ಜಿಂದಗಿ ಕೆ ಸಾಥ್ ಭಿ, ಜಿಂದಗೀ ಕೆ ಬಾದ್ ಭೀ” ಲೂಟಿ ಮಾಡಲಿದೆ ಎಂದು ಹರಿಹಾಯ್ದರು.
“ನೀವು ಬದುಕಿರುವವರೆಗೆ, ಕಾಂಗ್ರೆಸ್ನ ಹೆಚ್ಚುವರಿ ತೆರಿಗೆ ನಿಮ್ಮನ್ನು ಹೈರಾಣಾಗಿಸುತ್ತದೆ. ನೀವು ಸತ್ತಾಗ, ಅವರು ಪಿತ್ರಾರ್ಜಿತ ತೆರಿಗೆಯ ಹೊರೆಯನ್ನು ನಿಮ್ಮ ಮೇಲೆ ಹಾಕುತ್ತಾರೆ” ಎಂದು ಜನರನ್ನುದ್ದೇಶಿಸಿ ಹೇಳಿದ್ದಾರೆ.
ಪಿತ್ರೋಡಾ ಅವರ ಹೇಳಿಕೆಗಳಿಂದ ಕಾಂಗ್ರೆಸ್ ದೂರವಿದ್ದು, ಅವು ಪಕ್ಷದ ಸ್ಥಾನಮಾನವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ.