ಮಲ್ಪೆ: ಒಂದು ದೇವಸ್ಥಾನದ ಜೀರ್ಣೋದ್ದಾರ ಎಂದರೆ ಇಡೀ ಊರಿಗೆ ಊರೇ ಸಂಭ್ರಮಿಸುತ್ತದೆ. ದೇವರು ಮತ್ತೆ ಆಲಯ ಸೇರುವುದರೊಂದಿಗೆ ಎಲ್ಲರಿಗೂ ಶ್ರೇಯಸ್ಸಾಗುತ್ತದೆ. ಆತನ ಅನುಗ್ರಹ ದೇವಸ್ಥಾನಕ್ಕೆ ದುಡಿದ ಎಲ್ಲರಿಗೂ ಸಿಗುವಂತಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.
ಅವರು ಶುಕ್ರವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಧ್ವರ ಪವಿತ್ರ ಕ್ಷೇತ್ರ ವಡಭಾಂಡೇಶ್ವರ ಅದಮಾರು ಮಠದ ಕಿರಿಯ ಯತಿ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ದೇವರ ಚಿಂತನೆ, ಸಂಸ್ಕಾರವನ್ನು ಕಲಿಸುವ ಶಾಲೆ ದೇವಸ್ಥಾನ. ದೇವರ ಸನ್ನಿಧಾನ ಕಾರ್ಣಿಕವಾಗಿ ಬೆಳಗ ಬೇಕಾದರೆ ಅಲ್ಲಿನ ಅರ್ಚಕರ ತಪಸ್ಸು ವಿಶೇಷವಾಗಿರಬೇಕು. ಆಚಾರ್ಯ ಮಧ್ವಚಾರ್ಯರು ನಡೆದಾಡಿದ. ಅವರು ಪೂಜೆ ಮಾಡಿದ ಕ್ಷೇತ್ರ ವಡಭಾಂಡೇಶ್ವರ. ಆದ್ದರಿಂದ ಇಲ್ಲಿನ ಕ್ಷೇತ್ರ ಪವಿತ್ರವಾಗಿದೆ. ಅಂತಹ ಜಾಗದಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಇದೆ ಎಂದರು.
ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ವಿದ್ವಾನ್ ರವೀಂದ್ರ ಭಟ್ ಹೆರ್ಗ ಧಾರ್ಮಿಕ ಪ್ರವಚನ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಧರ್ಮದರ್ಶಿ ಆನಂದ ಸಿ. ಕುಂದರ್, ಉದ್ಯಮಿಗಳಾದ ಆನಂದ ಪಿ. ಸುವರ್ಣ, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಬಡಾನಿಡಿಯೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ್ ಪೂಜಾರಿ ಬಡಾನಿಡಿಯೂರು, ಮಲ್ಪೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ, ಬಂಗೇರ, ಧಾರ್ಮಿಕ ಚಿಂತಕ ಪ್ರೊ| ಪವನ್ ಕಿರಣ್ರೆ, ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ್ ಕೊಳ, ಬೆಳ್ಳಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಟಿ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು, ಪ್ರಧಾನ ಕಾರ್ಯದರ್ಶಿ ಶಶಿಧರ್ ಅಮೀನ್ಅವರನ್ನು ಗೌರವಿಸಲಾಯಿತು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಮೂಲಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಉಪನ್ಯಾಸಕ ದಯಾನಂದ ಉಗೈಲ್ ಬೆಟ್ಟು ನಿರೂಪಿಸಿ, ವಂದಿಸಿದರು.