ಮುಂಬೈ: ಪ್ರಪ್ರಂಚದ ಅತಿದೊಡ್ಡ ಸ್ಲಮ್ ಎನ್ನುವ ಕುಖ್ಯಾತಿ ಪಡೆದ ಧಾರಾವಿಯ(Dharavi) ಕಠಿಣ ಪರಿಸರದಲ್ಲಿ ಬೆಳೆದ ಲೆಫ್ಟಿನೆಂಟ್ ಉಮೇಶ್ ಕೀಲು ಇಂದು ಭಾರತೀಯ ಸೇನೆಯಲ್ಲಿ(Indian Army) ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದಾರೆ.
ಸಯಾನ್ ಕೋಳಿವಾಡದ ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಉಮೇಶ್, ಶನಿವಾರ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.
ಧಾರಾವಿಯ 10* 5 ಅಡಿಯ ಮನೆಯಲ್ಲಿ ನಾಲ್ಕು ಜನರ ಪರಿವಾರದಿಂದ ಬಂದ ಉಮೇಶ್ ಕೀಲು ಎಲ್ಲ ಸಂಕಷ್ಟಗಳನ್ನು ಮೀರಿ ಇಂದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಯನ್ನು ಗಳಿಸಿಕೊಂಡಿದ್ದಾರೆ.
ಉಮೇಶ್ ಕೀಲು ತಂದೆ ಪೈಂಟರ್ ಆಗಿದ್ದು ತನ್ನ ಎರಡೂ ಮಕ್ಕಳು ಅತ್ಯುತ್ತಮ ಶಿಕ್ಷಣ ಪಡೆಯುವಂತೆ ನೋಡಿಕೊಂಡಿದ್ದಾರೆ. 2013 ರಲ್ಲಿ, ಕೀಲು ತಂದೆ ತೀವ್ರವಾದ ಪಾರ್ಶ್ವವಾಯುವಿಗೆ ಒಳಗಾಗಿ ಕುಟುಂಬದ ಅಲ್ಪ ಸಂಪಾದನೆ ನಿಂತರೂ ಕೀಲು ಮಾತ್ರ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸದೆ, ವಿದ್ಯಾರ್ಥಿವೇತನದಿಂದ ಶಿಕ್ಷಣ ಪಡೆದು ಇದೀಗ ದೇಶ ಸೇವೆಗೆ ಕಟಿಬದ್ದರಾಗಿ ನಿಂತಿದ್ದಾರೆ.
ಉಮೇಶ್ , ಐಟಿ ಪದವಿ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಎನ್ಸಿಸಿ ಏರ್ ವಿಂಗ್ನಲ್ಲಿ ಸೇವೆ ಸಲ್ಲಿಸಿ ‘ಸಿ’ ಪ್ರಮಾಣಪತ್ರವನ್ನು ಗಳಿಸಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಸೈಬರ್ ಕೆಫೆಯಲ್ಲಿ ಅರೆಕಾಲಿಕ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ, ಟಾಟಾ ಕನ್ಸಲ್ಟೆಂಸಿ ಮುಂತಾದೆಡೆ ಉದ್ಯೋಗ ಮಾಡಿದ್ದಾರೆ.
ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (SSB) ಅನ್ನು ತೆರವುಗೊಳಿಸಿ ಪ್ರತಿಷ್ಠಿತ ಅಕಾಡೆಮಿಗೆ ಸೇರಲು ಉಮೇಶ್ ಒಟ್ಟು 12 ಪ್ರಯತ್ನಗಳನ್ನು ಮಾಡಿದ್ದಾರೆ. ಅಂತಿಮವಾಗಿ ಆಯ್ಕೆಯಾದಾಗ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಆದಾಗ್ಯೂ, ಕಠಿಣ ಪರಿಶ್ರಮದಿಂದ ಇಂದು ಉನ್ನತ ಸ್ಥಾನಕ್ಕೇರಿದ್ದಾರೆ.
ಒಟಿಎಯಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕೀಲು ಅವರು ಧಾರಾವಿ ಕೊಳೆಗೇರಿಯ ಇತರ ಯುವಕರನ್ನು ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸುವುದಾಗಿ ಹೇಳಿದ್ದಾರೆ.