ರೈತ ಪ್ರತಿಭಟನೆ: ಕೇಂದ್ರ ಸರ್ಕಾರದಿಂದ ಪಂಚವಾರ್ಷಿಕ ಯೋಜನೆ ಪ್ರಸ್ತಾವ; ಕಾಲಾವಕಾಶ ಬೇಡಿದ ರೈತರು

ಚಂಡೀಗಢ: ಕಳೆದ ವಾರ ಪಂಜಾಬ್-ಹರಿಯಾಣ ಗಡಿಯಲ್ಲಿ ಭಾರೀ ಮುಖಾಮುಖಿಯಾಗಿದ್ದ ಬಿಕ್ಕಟ್ಟಿನಲ್ಲಿ ನಿನ್ನೆ ತಡರಾತ್ರಿ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರಿ ನಿಯೋಗದ ನಡುವಿನ ನಾಲ್ಕನೇ ಸಭೆಯು ನಡೆದಿದೆ.

ಮುಂದಿನ ಐದು ವರ್ಷಗಳವರೆಗೆ ಪಂಜಾಬ್‌ನ ರೈತರಿಂದ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಕನಿಷ್ಠ ಸುರಕ್ಷತಾ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಧ್ಯರಾತ್ರಿಯ ನಂತರ ನಡೆದ ಚಂಡೀಗಢ ಸಭೆಯ ಬಳಿಕ ತಿಳಿಸಿದ್ದಾರೆ.

ಪ್ರತಿಭಟನಾನಿರತ ರೈತರು ತಮ್ಮ ವೇದಿಕೆಗಳಲ್ಲಿ ಪ್ರಸ್ತಾವನೆಯನ್ನು ಚರ್ಚಿಸಲು ಎರಡು ದಿನಗಳ ಕಾಲಾವಕಾಶ ಕೋರಿದ್ದು, ತಮ್ಮ ಇತರ ಬೇಡಿಕೆಗಳ ನಿರ್ಧಾರವು ಬಾಕಿ ಉಳಿದಿದೆ.

ಸಚಿವರಾದ ಅರ್ಜುನ್ ಮುಂಡಾ ಮತ್ತು ನಿತ್ಯಾನಂದ ರೈ ಅವರೊಂದಿಗೆ ರೈತರನ್ನು ಭೇಟಿ ಮಾಡಿದ ಪಿಯುಷ್ ಗೋಯಲ್, ಪ್ರಸ್ತಾವಿತ ಖರೀದಿಗಾಗಿ ಮುಂದಿನ ಐದು ವರ್ಷಗಳವರೆಗೆ ರೈತರೊಂದಿಗೆ ಸರ್ಕಾರಿ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕುತ್ತವೆ ಮತ್ತು ಖರೀದಿ ಪ್ರಮಾಣದಲ್ಲಿ ಯಾವುದೇ ಮಿತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

NCCF (ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ) ಮತ್ತು NAFED (ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ) ನಂತಹ ಸಹಕಾರ ಸಂಘಗಳು ತಮ್ಮ ಬೆಳೆಯನ್ನು MSP ಯಲ್ಲಿ ಖರೀದಿಸಲು ತೊಗರಿಬೇಳೆ, ಉದ್ದಿನ ಬೇಳೆ, ಮಸೂರ್ ಬೇಳೆ ಅಥವಾ ಮೆಕ್ಕೆಜೋಳವನ್ನು ಬೆಳೆಯುವ ರೈತರೊಂದಿಗೆ ಐದು ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳುತ್ತವೆ ಎಂದು ಸಚಿವರು ಹೇಳಿದ್ದಾರೆ.

ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.