ಮಾ.17 – ಎ. 2 ರವರೆಗೆ 1500 ವರ್ಷಗಳ ಐತಿಹ್ಯದ ಪೆರ್ಣಂಕಿಲ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು

ಹಿರಿಯಡ್ಕ: ಪೆರ್ಣಂಕಿಲ ಗ್ರಾಮದ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಸುಮಾರು 1500 ವರ್ಷಗಳ ಐತಿಹ್ಯವಿರುವ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮಾ.17 ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭವಾಗಿ ಎ. 2 ರಂದು ಜಾತ್ರೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಈ ಬಗ್ಗೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪೇಜಾವರ ಮಠದ ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಪಾದರ ಆಶಯದಂತೆ ಅವರ ಶಿಷ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಭಕ್ತರ ಸಹಕಾರದಲ್ಲಿ 10 ಕೋಟಿ ವೆಚ್ಚದಲ್ಲಿ ದೇವಳಗಳ ಜೀರ್ಣೋದ್ಧಾರ, 5 ಕೋಟಿ ವೆಚ್ಚದಲ್ಲಿ ಪೇಜಾವರ ಶಾಖಾ ಮಠದ ಪುನರ್ ನಿರ್ಮಾಣ ಮತ್ತು 5 ಕೋಟಿ ವೆಚ್ಚದಲ್ಲಿ ಸಭಾಂಗಣ ಮತ್ತು ಭೋಜನಾಲಯ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು ಕಾಮಗಾರಿ ಕೊನೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಗುರುಕುಲ ಮತ್ತು ಗೋಶಾಲೆಗಳ ನಿರ್ಮಾಣದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ತೀರಾ ಗ್ರಾಮೀಣ ಪ್ರದೇಶದಲ್ಲಿದ್ದರೂ ದಾನಿಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇರದೆ ಸ್ವತಃ ದಾನಿಗಳೇ ಕ್ಷೇತ್ರಕ್ಕೆ ಬಂದು ದೇಣಿಗೆ ಸಮರ್ಪಿಸುತ್ತಿರುವುದು ಕ್ಷೇತ್ರದ ಪಾವಿತ್ರ್ಯತೆ ಶಕ್ತಿಯನ್ನು ಸೂಚಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ದಿವಾಣರಾದ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ತಂತ್ರಿಗಳಾದ ಮಧುಸೂಧನ ತಂತ್ರಿ ಹಾಗೂ ವಾಸ್ತುಶಾಸ್ತ್ರಜ್ಞರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಪಸ್ಥಿತರಿದ್ದರು.