ಶ್ರೀ ಕ್ಷೇತ್ರ ಪರ್ಪಲೆಗಿರಿಯ ಪುನರುತ್ಥಾನ ಕಾರ್ಕಳದ ಇತಿಹಾಸದಲ್ಲಿ ಹೊಸ ಅಧ್ಯಾಯ: ಕಾಳಹಸ್ತೇಂದ್ರ ಮಹಾಸ್ವಾಮೀಜಿ

ಕಾರ್ಕಳ : ಶ್ರೀ ಕ್ಷೇತ್ರ ಪರ್ಪಲೆಗಿರಿಯ ಪುನರುತ್ಥಾನದೊಂದಿಗೆ ಕಾರ್ಕಳದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಗೊಂಡು ಹಿಂದೂ‌ ಸಮಾಜದ ಅಭಿಯಾನಕ್ಕೆ ಹೊಸ ದಿಕ್ಕು ನೀಡಿದಂತಾಗಿದೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ನುಡಿದರು.

ಅವರು ಫೆ. 11ರಂದು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ಕಲ್ಕುಡ ಸ-ಪರಿವಾರ ದೈವಗಳ ನೂತನ ಗರ್ಭಗುಡಿಯ ಶಿಲಾನ್ಯಾಸ ವಿಧಿ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಮಕ್ಕಳಿಗೆ ಎಳವೆಯಲ್ಲೇ ಧಾರ್ಮಿಕ ಪ್ರಜ್ಞೆ, ನಮ್ಮ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪರಿವರ್ತನಾ ಕೇಂದ್ರ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ. ಶ್ರೀ ಕ್ಷೇತ್ರ ಕೇವಲ‌ ಧಾರ್ಮಿಕ ಕೇಂದ್ರವಾಗಿರದೇ ಸಾಂಸ್ಕೃತಿಕ ಕ್ಷೇತ್ರವಾಗಿಯೂ ಬೆಳಗಲಿ ಎಂದು ಸ್ವಾಮೀಜಿ ಹಾರೈಸಿದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮುಂಬೈ ಹೇರಂಬ ಇಂಡಸ್ಟ್ರೀಸ್‌ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ತುಳುನಾಡಿನ ದೈವೀ ಶಕ್ತಿಗಳು ಕಾರಣಿಕವಾದುದು. ನಮ್ಮ ಪ್ರಯತ್ನದೊಂದಿಗೆ ದೈವ ದೇವರುಗಳ‌ ಮೇಲೆ ಅಚಲ ನಂಬಿಕೆಯಿದ್ದಾಗ ಮಾತ್ರ ನಾವು ಕೈಗೊಂಡ ಕಾರ್ಯ ಯಶಸ್ವಿಯಾಗುವುದು. ಪರ್ಪಲೆಯಂತಹ ಕಾರಣೀಕ ಕ್ಷೇತ್ರದ‌ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರೆತಿರುವುದು ಸಂತಸದಾಯಕ ಎಂದರು.

‌ಹಿಂ. ಜಾ. ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ದೋ. ಕೇಶವಮೂರ್ತಿ ಮಾತನಾಡಿ, ಭಾರತದ‌ ಮಣ್ಣಿನ ಕಣ ಕಣದಲ್ಲೂ ದೈವತ್ವವಿದೆ. ಅಂತಹ ಅಗೋಚರ ಶಕ್ತಿ ನಮ್ಮನ್ನು ಜಾಗೃತಗೊಳಿಸಿದ ಪ್ರತೀಕವಾಗಿ ನಾವಿಂದು ಸೇರಿದ್ದೇವೆ. ಅತ್ತೂರು ಪರ್ಪಲೆಗಿರಿ ಕೇವಲ‌ ಭಕ್ತಿಗೆ ಸೀಮಿತವಾಗದೇ ರಾಷ್ಟ್ರ‌ ಜಾಗೃತಿಯನ್ನು ಮೂಡಿಸುವ ಕ್ಷೇತ್ರವಾಗಲಿ. ಹಿಂದೂ ಸಮಾಜವನ್ನು ಭದ್ರಗೊಳಿಸುವ ಕೆಲಸ ಈ ಕ್ಷೇತ್ರದ ಮೂಲಕ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಮೂಡುಬಿದಿರೆ ಎಸ್‌. ಕೆ. ಎಫ್‌. ನ‌ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ ಮಾತನಾಡಿ, ಕಲ್ಕುಡ‌ ಕಲ್ಲುರ್ಟಿ ವಿಶ್ವಕರ್ಮ ಸಮುದಾಯದವರಾಗಿರುವುದು ನಮ್ಮ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ವಿಷಯ.‌ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಮುದಾಯದವರ‌ ಪಾತ್ರವೂ ಮಹತ್ತರವಾದುದು. ಈ‌ ನಿಟ್ಟಿನಲ್ಲಿ ನಾನು ಸದಾ ಸಹಕರಿಸುತ್ತೇನೆ ಎಂದರು.

ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ಎಲ್ಲಿ ಧಾರ್ಮಿಕ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆಯೋ ಅಲ್ಲಿ ಶಿಕ್ಷಣ ಸಂಸ್ಥೆಯೂ ಪ್ರಾರಂಭವಾಗಬೇಕು. ತನ್ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವೂ ದೊರೆಯುವಂತಾಗಬೇಕು. ಅಂತಹ ಕಾರ್ಯ ಈ ಕ್ಷೇತ್ರದಲ್ಲೂ ನಡೆಯಲಿ. ನಮ್ಮ‌ ಧರ್ಮ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕು. ಧಾರ್ಮಿಕತೆಯ ಕೆಲಸದಲ್ಲಿ ಸಂಘರ್ಷ ಬೇಡ ಬದಲಾಗಿ ಸಾಮರಸ್ಯವಿರಲಿ ಎಂದ ಅವರು ಕಾರ್ಕಳದ ಹೆಗ್ಗಳಿಕೆಗೆ ಪರ್ಪಲೆ ಕ್ಷೇತ್ರ ಮತ್ತೊಂದು ಗರಿಯಾಗಲಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್‌ನ ಗೌರವಾಧ್ಯಕ್ಷ ಎಂ. ಕೆ. ವಿಜಯ್ ಕುಮಾರ್ ಮಾತನಾಡಿ, ಹಿಂದೂ ಸಮುದಾಯದ ಯುವಜನತೆ ಜಾಗೃತಗೊಂಡ‌ ಪರಿಣಾಮವಾಗಿ ಇಂದು ಪರ್ಪಲೆಗಿರಿ ಕ್ಷೇತ್ರ ಪುನರುತ್ಥಾನಗೊಳ್ಳುತ್ತಿದೆ ಎಂದು ಹೇಳಿದರು.

ಟ್ರಸ್ಟ್‌ನ ಕೋಶಾಧಿಕಾರಿ ನಿತ್ಯಾನಂದ ಪೈ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಸಮಾಜದ ಪ್ರತಿಯೋರ್ವರ ಸಹಕಾರ ಅಗತ್ಯವೆಂದರು.

ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಹಿಂದೂ ಜಾಗರಣ ವೇದಿಕೆಯು ಶ್ರೀ ಕ್ಷೇತ್ರ ಪರ್ಪಲೆಗಿರಿಯ ಪುನರುತ್ಥಾನಕ್ಕೆ ಮುನ್ನುಡಿ ಬರೆದಿದ್ದು, ಸುಮಾರು 15 ಕೋ. ರೂ. ವೆಚ್ಚದಲ್ಲಿ ನೂತನ ಗುಡಿಗಳು ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ನಾವು ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಅಮೃತ ಕಾಲದಲಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಅತ್ತೂರು ಪರ್ಪಲೆ ಕ್ಷೇತ್ರದ ‌ಪುನರುತ್ಥಾನವಾಗುತ್ತಿರುವುದು ಸಂತಸದಾಯಕ. ಕಾರ್ಕಳ ಪ್ರವಾಸಿ ಕೇಂದ್ರವಾಗಿ ಮೂಡಿಬರುವ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸುತ್ತಿದೆ. ಶ್ರೀ ಕ್ಷೇತ್ರ ಹಿಂದೂ ಸಮಾಜಕ್ಕೆ‌ ಶಕ್ತಿ ತುಂಬುವ ಕೇಂದ್ರವಾಗಲಿ. ಜನಪ್ರತಿನಿಧಿಯಾಗಿ ಸರಕಾರದಿಂದ ಅನುದಾನ ಒದಗಿಸುವಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದರೊಂದಿಗೆ ಒಬ್ಬ ಭಕ್ತನಾಗಿ ಒಬ್ಬ ಕಾರ್ಯಕರ್ತನಾಗಿ ಶ್ರೀ ಕ್ಷೇತ್ರದ ಪುನರುತ್ಥಾನಕ್ಕೆ ನಾನು ಸದಾ ಸಹಕರಿಸುವೆ. ಒಂದು ವರ್ಷದೊಳಗೆ ದೇವಸ್ಥಾನದ‌ ಕೆಲಸ ಪೂರ್ಣಗೊಳ್ಳುವಂತಾಗಲಿ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕಾರ್ಯನಿರ್ವಹಿಸುವ ಎಂದರು.

ಉದ್ಯಮಿಗಳಾದ ಇನ್ನಂಜೆ ಶಶಿಧರ ಶೆಟ್ಟಿ, ಬೋಳ ಪ್ರಭಾಕರ್‌ ಕಾಮತ್‌, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಟ್ರಸ್ಟ್‌ನ ಗೌರವ ಅಧ್ಯಕ್ಷ ವಿಠಲ್ ಶೆಟ್ಟಿ ಬಲಿಪ ಗುತ್ತು, ಅಧ್ಯಕ್ಷ ಪ್ರಶಾಂತ ನಾಯಕ್‌, ಕಾರ್ಯಾಧ್ಯಕ್ಷ ಬೋಳ ಪ್ರಶಾಂತ್‌ ಕಾಮತ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ, ಕಲ್ಕುಡ ದೈವಸ್ಥಾನದ ವಾಸ್ತುಶಿಲ್ಪಿ ಪ್ರಮಲ್ ಕುಮಾರ್, ಉದಯ್ ಶೆಣೈ, ಚಂದ್ರಶೇಖರ ಶೆಟ್ಟಿ, ಬಾಲಾಜಿ ಶಿಬಿರದ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆ, ಮನ್ಮಥ ಹೆಗ್ಡೆ, ಚೇತನ್ ಕೋಟ್ಯಾನ್, ಸುಭಾಷ್ ಹೆಗ್ಗಡೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುನರುತ್ಥಾನ ಸಮಿತಿಯ ಕಾರ್ಯದರ್ಶಿ ರಮೇಶ್‌ ಕಲ್ಲೋಟ್ಟೆ ಸ್ವಾಗತಿಸಿದರು. ಶ್ರೀಕಾಂತ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್‌ನ ಕಾರ್ಯದರ್ಶಿ ರತ್ನಾಕರ್‌ ಅಮೀನ್‌ ವಂದಿಸಿದರು.