ಉಡುಪಿ: ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಯ ಉದ್ಯಮಿಗಳನ್ನು ಬೆಂಬಲಿಸುವುದರೊಂದಿಗೆ ಉದ್ಯೋಗಾವಕಾಶ ಸೃಷ್ಠಿಸಲು 173 ಫಲಾನುಭವಿಗಳಿಗೆ 40.18 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನುಳಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಸೂಚನೆ ನೀಡಿದರು.
ಪಿ.ಎಂ.ಸ್ವ-ನಿಧಿ ಯೋಜನೆಯಡಿಯಲ್ಲಿ ಶೇ. 138 ಸಾಧನೆ ಮಾಡಲಾಗಿದ್ದು, ಈ ಯೋಜನೆಯಡಿ 2819 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಿ, ಮೊದಲನೇ ಹಂತದಲ್ಲಿ 4462 ಜನರಿಗೆ ಸಾಲ ವಿತರಿಸಿ, ಸಾಲ ವಿತರಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಎರಡನೇ ಹಂತದಲ್ಲಿ 2101 ಜನರಿಗೆ ಸಾಲ ವಿತರಿಸುವ ಗುರಿ ಇದ್ದು, ಈಗಾಗಲೇ 2504 ಜನರಿಗೆ ಸಾಲ ವಿತರಿಸಲಾಗಿದೆ. ಉಳಿದ 390 ಅರ್ಜಿಗಳಿಗೆ ಸಾಲ ವಿತರಿಸುವ ಮೂಲಕ ಜಿಲ್ಲೆಯನ್ನು ಮೊದಲ ಸ್ಥಾನದಲ್ಲಿಯೇ ಮುಂದುವರೆಸಿಕೊಂಡು ಹೋಗಲು ಎಲ್ಲಾ ಬ್ಯಾಂಕ್ನ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ವಿಶೇಷ ಗಮನ ಕಾರ್ಯಕ್ರಮದಡಿ ದುರ್ಬಲ ವಲಯಕ್ಕೆ 2661 ಕೋಟಿ ರೂ, ಉನ್ನತ ವ್ಯಾಸಾಂಗ ಮಾಡಲು ವಿದ್ಯಾರ್ಥಿಗಳಿಗೆ 545 ಕೋಟಿ ರೂ., ವಸತಿ ವಲಯಗಳ ಸುಸ್ಥಿರ ಅಭಿವೃದ್ಧಿಗೆ 2015 ಕೋಟಿ ರೂ. ಗಳ ಸಾಲ ವಿತರಣೆ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ವಿವಿಧ ಯೋಜನೆಗಳ ಕುರಿತು ಎಲ್ಲಾ 155 ಗ್ರಾಮ ಪಂಚಾಯತ್ ಮತ್ತು 11 ನಗರ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಮಾಹಿತಿ ಒದಗಿಸಿ, ಯೋಜನೆಗಳ ಪ್ರಯೋಜನ ಪಡೆಯಲು ಸಹಕರಿಸಿದ ಎಲ್ಲಾ ಬ್ಯಾಂಕರ್ ಗಳು, ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಕೆನರಾ ಬ್ಯಾಂಕ್ನ ರೀಜನಲ್ ಮ್ಯಾನೆಜರ್ ಶೀಬಾ ಶೆಹಜಾನ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಕ್ರೆಡಿಟ್ ಠೇವಣಿ ಅನುಪಾತವು ಶೇ. 48.41 ರಷ್ಟು ಬೆಳವಣಿಗೆಯಾಗಿ ಶೇ. 1.62 ರಷ್ಟು ಸಾಧನೆ ಮಾಡಲಾಗಿದೆ. ಇದು ಜಿಲ್ಲೆಯ ಬ್ಯಾಂಕಿನ ಆರ್ಥಿಕ ಸಂಪನ್ಮೂಲಗಳ ಬಳಕೆಯಾಗಿರುವುದು ಸೂಚಿಸುತ್ತದೆ ಎಂದರು.
ಜಿಲ್ಲೆಯ ಬ್ಯಾಂಕ್ಗಳಲ್ಲಿ 56,191 ಕೋಟಿ ರೂ ವ್ಯವಹಾರ ನಡೆದಿದ್ದು, ಸಾಲ ವಿತರಣೆಯಲ್ಲಿ 12.19 ರಷ್ಟು
ಬೆಳೆವಣಿಗೆಯಾಗಿದೆ. ಜಿಲ್ಲೆಯ ಆರ್ಥಿಕ ಬೆಳವಣಿಗೆ ಸುಧಾರಿಸಲು ಸಹಕಾರ ನೀಡಿದ ಎಲ್ಲಾ ಬ್ಯಾಂಕರ್ ಗಳಿಗೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಅಧಿಕಾರಿ ಮುರಳಿ ಮೋಹನ್ ಪಾಥಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ ಪಿಂಜಾರ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಶೇರಿಗಾರ್
ಹಾಗೂ ಮತ್ತಿತರರು ಉಪಸ್ಥಿತರಿದ್ದರು.