ಸುಬ್ರಹ್ಮಣ್ಯ: ಚಾರಣಿಗರ ಅತಿ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾದ ಕುಮಾರಪರ್ವತ ಚಾರಣವನ್ನು ಫೆ. 1ರಿಂದ ಅಕ್ಟೋಬರ್ ತನಕ ಅಥವಾ ಮುಂದಿನ ಆದೇಶದ ತನಕ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಏರುಗತಿಯಲ್ಲಿದ್ದು ಈ ಬಾರಿ ಮಳೆ ಕೊರತೆಯಿಂದ ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗಿರ್ವ ಹಿನ್ನೆಲೆಯಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ವರ್ಷದ ಕುಮಾರಪರ್ವತ ಚಾರಣದ ಅವಧಿ ಮುಗಿದಿದೆ. ಪರ್ವತದ ಹುಲ್ಲುಗಾವಲು ಸಂಪೂರ್ಣ ಒಣಗಿರುವುದರಿಂದ ಬೆಂಕಿಗೆ ಅವಘಡ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಕುಮಾರಪರ್ವತಕ್ಕೆ ಭೇಟಿ ನೀಡುವ ಚಾರಣಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬೇಸಗೆಯ ಕಾರಣ ನೀರಿನ ಮೂಲಗಳು ಬತ್ತಿ ಹೋಗಿವೆ. ಚಾರಣಿಗರು ತಂಗುವ ಗಿರಿಗದ್ದೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಒದಗಿಸಲು ತೊಂದರೆಯಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.