ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, 2006ರ ಏಪ್ರಿಲ್ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆಯಾದ ನೌಕರರು, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ವ್ಯಾಪ್ತಿಯಿಂದ ಹೊರಬಂದು ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಗಲು ಅವಕಾಶ ಮಾಡಿಕೊಟ್ಟಿದೆ.
ಈ ಬಗ್ಗೆ ಆಡಳಿತ ಮತ್ತು ಸಮನ್ವಯ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆಗೆ ಒಳಪಡಲು 6 ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ.
ಹಳೆಯ ಪಿಂಚಣಿ ಸೇವೆಗೆ ಒಳಪಡಲು ಸರ್ಕಾರಿ ನೌಕರರು ತಾವೇ ಒಪ್ಪಿಗೆ ಸೂಚಿಸಬೇಕು. 2006ರ ಏಪ್ರಿಲ್ಗಿಂತ ಮೊದಲು ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಹಳೆಯ ಪಿಂಚಣಿ ಸೇವೆಗೆ ಒಳಪಟ್ಟರೆ, ಬದಲಾವಣೆಗೆ ಮತ್ತೆ ಅವಕಾಶವಿರುವುದಿಲ್ಲ. ಇನ್ನು ಒಪಿಎಸ್ಗೆ ಒಳಪಡದೆ ಹೋದರೆ ಅಂತಹ ನೌಕರರು ಎನ್ಪಿಎಸ್ನಲ್ಲೇ ಮುಂದುವರಿಯುತ್ತಾರೆ.
ಒಪಿಎಸ್ಗೆ ಅರ್ಜಿ ಸಲ್ಲಿಸಲು 2024ರ ಜೂನ್ 30ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅವಕಾಶ ಎಲ್ಲಾ ಸರ್ಕಾರಿ ನೌಕರರಿಗೂ ಸಂಬಂಧಪಟ್ಟಿರುವುದಿಲ್ಲ. ಕೇವಲ ಏಪ್ರಿಲ್ 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಅನ್ವಯವಾಗಲಿದ್ದು, ಹಳೆಯ ಪಿಂಚಣಿ ಸೇವೆಗೆ ಒಳಪಟ್ಟರೆ, ಬದಲಾವಣೆಗೆ ಮತ್ತೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ 22-12-2003ರ ಮೊದಲು ನೇಮಕಾತಿ ಅಧಿಸೂಚನೆಯಲ್ಲಿ ನೇಮಕವಾಗಿ 01-01-2004ರಂದು ಅಥವಾ ತದನಂತರ ಸೇವೆಗೆ ಸೇರಿದ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಬಾರಿಯ ಆಯ್ಕೆಯ ಅವಕಾಶವನ್ನು ಕಲ್ಪಿಸಿ 31-08-2023 ರೊಳಗೆ ಆಯ್ಕೆ ಮಾಡಿಕೊಳ್ಳಲು ಮಾರ್ಗಸೂಚಿ ಹೊರಡಿಸಿತ್ತು. ಅದೇ ರೀತಿ ರಾಜ್ಯ ಸರ್ಕಾರಿ ನೌಕರರಿಗೂ 2006ರ ಏ.1 ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ, ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಷರತ್ತುಗಳು:
1.ದಿನಾಂಕ: 01-04-2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಒಪಿಎಸ್ಗೆ ಒಳಪಡಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ ಜೂನ್ 30ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು. ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ.
2.ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.
3.ಮೇಲಿನ 1 ರಂತೆ ಆಯ್ಕೆಯನ್ನು ಚಲಾಯಿಸಲು ಅರ್ಹ ಸರ್ಕಾರಿ ನೌಕರರು ನಿಗದಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದೇ ಇದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯುತ್ತಾರೆ.
4.ನೌಕರರ ಆಯ್ಕೆಗನುಸಾರ ಅವರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ (ಒಪಿಎಸ್) ಒಳಪಡಲು ನಿಗದಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಂಡು ಜುಲೈ 31ರೊಳಗಾಗಿ ಅಂತಹ ನೌಕರರನ್ನು ಒಪಿಎಸ್ಗೆ ಒಗೊಳಪಡಿಸಲು ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಢೀಕೃತ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.
5.ಇಲಾಖಾ ಮುಖ್ಯಸ್ಥರು ತಮ್ಮ ಅಧೀನದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹ ನೌಕರರ ಪಟ್ಟಿಯನ್ನು ಆಗಸ್ಟ್ 31. ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸತಕ್ಕದ್ದು.
- ದಿನಾಂಕ: 01.04.2006ರ ಪೂರ್ವದಲ್ಲಿನ ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ(ಒಪಿಎಸ್) ಸೌಲಭ್ಯ ಪಡೆದುಕೊಳ್ಳಲು ಇಚ್ಚಿಸಿದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ಜೂನ್ 30 ರೊಳಗಾಗಿ ಸಲ್ಲಿಸತಕ್ಕದ್ದು. ನೇಮಕಾತಿ ಪ್ರಾಧಿಕಾರವು ಅಂತಹ ಸರ್ಕಾರಿ ನೌಕರನು ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಅನ್ಯ ಇಲಾಖೆಗೆ ಆಯ್ಕೆಯಾದ ಹುದ್ದೆಗೆ ವರದಿಮಾಡಿಕೊಳ್ಳುವ ಸಲುವಾಗಿ ಬಿಡುಗಡೆ ಹೊಂದಿರುವುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು.