ಬೆಂಗಳೂರು: ವಿಶ್ವವೇ ವಿಸ್ಮಿತವಾಗಿ ನೋಡುತ್ತಿರುವ ಮಂದಸ್ಮಿತ ಸಜೀವ ನೇತ್ರಗಳ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಮೈಸೂರಿನ ಅರುಣ್ ಯೋಗಿರಾಜ್ ಜ.24 ರಂದು ರಾಜ್ಯಕ್ಕೆ ಮರಳಿದ್ದಾರೆ. ಅರುಣ್ ಯೋಗಿರಾಜ್ ಅವರಿಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅರುಣ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.
ಜನರು ಅರುಣ್ ಯೋಗಿರಾಜ್ ಅವರನ್ನು ಮುತ್ತಿಕೊಂಡಿದ್ದು, ಪೇಟ ತೊಡಿಸಿ ಶಾಲು ಹೊದೆಸಿ ಗೌರವಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ದೇಶಾದ್ಯಂತ ಜನರಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿರುವ ಬಗ್ಗೆ ಹರ್ಷಿತರಾಗಿರುವ ಅರುಣ್ “ಹತ್ತು ದಿನಗಳವರೆಗೆ ಗರ್ಭಗೃಹದಲ್ಲೇ ಇದ್ದು ವಿಗ್ರಹ ಕೊನೆ ಕ್ಷಣದ ಕಾರ್ಯಗಳನ್ನು ಮುಗಿಸಿದ್ದೇನೆ. ಅಲಂಕಾರ ಮುಗಿದ ಬಳಿಕ ಅಲ್ಲೇ ಕುಳಿತಿದ್ದ ನನಗೆ ಇದು ನನ್ನ ಕೆಲಸವಲ್ಲ ಎಂದೆಣಿಸಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ನಡೆದ ಬಳಿಕ ವಿಗ್ರಹ ಸಂಪೂರ್ಣವಾಗಿ ಬದಲಾದಂತೆ ಭಾಸವಾಗಿದೆ. ಇದು ಆ ರಾಮನೇ ನನಗೆ ನೀಡಿದ ಆದೇಶ ಅದರಂತೆ ನಾನು ಕೆಲಸ ಮಾಡಿದ್ದೇನೆ ಎಂದಿದ್ದಾರೆ.
ವಿಗ್ರಹ ನಿರ್ಮಾಣದ ಬಗ್ಗೆ ಟ್ರಸ್ಟ್ ನಿಂದ ಸ್ಪಷ್ಟ ನಿರ್ದೇಶನಗಳಿದ್ದವು. ಏಳು ತಿಂಗಳು ಜಗತ್ತಿನಿಂದ ವಿಮುಖನಾಗಿ ಮಕ್ಕಳ ಜೊತೆ ಸಮಯ ಕಳೆಯುತ್ತಾ ಮೂರ್ತಿ ನಿರ್ಮಿಸಿದ್ದೇನೆ. ಮಂದಸ್ಮಿತ, ದಿವ್ಯದೃಷ್ಟಿಯ, ಬಾಲರೂಪದ ರಾಜಕಳೆಯ ವಿಗ್ರಹ ನಿರ್ಮಾಣ ಮಾಡಬೇಕಾಗಿತ್ತು. ನನ್ನ ಇಬ್ಬರು ಮಕ್ಕಳಿಗೆ ರಾಮಲಲ್ಲಾ ವಿಗ್ರವನ್ನು ತೋರಿಸುತ್ತಿದ್ದೆ. ನನ್ನ ಏಳು ವರ್ಷದ ಮಗಳಿಗೆ ವಿಗ್ರಹ ತೋರಿಸಿ ಹೇಗಾಗಿದೆ ಎಂದು ಕೇಳಿದಾಗ “ಮಗುವಿನಂತೆಯೆ ಇದೆ ಅಪ್ಪಾ” ಎಂದು ಹೇಳಿದ್ದಳು ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದರ ಜೊತೆ ಒಂದು ಆಶ್ಚರ್ಯಕರ ಘಟನೆಯ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮೂರ್ತಿ ನಿರ್ಮಾಣ ಸಮಯದಲ್ಲಿ ಪ್ರತಿ ದಿನ ಸಂಜೆ 4-5 ಗಂಟೆ ಸಮಯದಲ್ಲಿ ಕೋತಿಯೊಂದು ನಿತ್ಯ ಮನೆಗೆ ಭೇಟಿ ನೀಡುತ್ತಿತ್ತು. ಚಳಿಯ ಸಮಯದಲ್ಲಿ ಗೇಟ್ ಬಾಗಿಲಿಗೆ ಪರದೆ ಹಾಕಲಾಗಿದ್ದರೆ ಬಂದು ಬಾಗಿಲು ಬಡಿಯುತ್ತಿತ್ತು. ಈ ಬಗ್ಗೆ ಟ್ರಸ್ಟ್ ನ ಟ್ರಸ್ಟಿ ಚಂಪತ್ ರಾಯ್ ಅವರಿಗೆ ತಿಳಿಸಿದಾಗ ಬಹುಷಃ ಕೋತಿಗೂ ಮೂರ್ತಿಯನ್ನು ನೋಡುವ ಇಚ್ಛೆ ಇರಬೇಕು ಎಂದಿದ್ದರು ಎನ್ನುವ ಮಾಹಿತಿ ನೀಡಿದ್ದಾರೆ. ಆಶ್ಚವೆಂಬಂತೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆದ ಮರುದಿನವೇ ಕೋತಿಯೊಂದು ರಾಮಮಂದಿರ ಗರ್ಭಗೃಹ ಪ್ರವೇಶಿಸಿ ಯಾರಿಗೂ ಹಾನಿ ಮಾಡದೆ ತೆರಳಿತ್ತು!!