ಉಡುಪಿ: ಪುತ್ತಿಗೆ ಮಠ ಪರ್ಯಾಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಆಗಮಿಸುವ ಭಕ್ತಾದಿಗಳು ಹಾಗೂ ನಾಗರಿಕರಿಗೆ ಸುಗಮ ಸಂಚಾರ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆ ಜಾರಿಗೊಳಿಸಿದೆ.
ನೂತನ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯಲ್ಲಿ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಗರದ 25 ಕಡೆಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಳವಡಿಸಲಾಗುತ್ತಿದ್ದು ಅದನ್ನು ಸ್ಕ್ಯಾನ್ ಮಾಡುವ ಮೂಲಕ ಭಕ್ತರು ಶ್ರೀಕೃಷ್ಣ ಮಠಕ್ಕೆ ತಲುಪುವ ವಿವರ ಹಾಗೂ ಪಾರ್ಕಿಂಗ್ ಸ್ಥಳದ ಮಾಹಿತಿ ಪಡೆಯಬಹುದು.
ಪರ್ಯಾಯಕ್ಕೆ ಆಗಮಿಸುವ ಹೊರ ರಾಜ್ಯ ಮತ್ತು ಜಿಲ್ಲೆಗಳ ಭಕ್ತರಿಗೆ ಸರಿಯಾದ ಮಾಹಿತಿ ಇಲ್ಲದೆ ಒಳರಸ್ತೆಗಳಿಂದ ನಗರಕ್ಕೆ ಪ್ರವೇಶಿಸಿದಾಗ ಟ್ರಾಫಿಕ್ ಸಮಸ್ಯೆಗೆ ಉಂಟಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹೊಸ ಪ್ರಯೋಗ ಮಾಡಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹೊರ ರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ನಿಗದಿತ ಸ್ಥಳವನ್ನು ಸುಲಭವಾಗಿ ತಲುಪಬಹುದು.
ಆರ್ ಕೋಡ್ ಅನ್ನು ಮೊಬೈಲ್ ಗಳ ಮೂಲಕ ಸ್ಕ್ಯಾನ್ ಮಾಡಿದಾಗ ಪರ್ಯಾಯ ಮಹೋತ್ಸವಕ್ಕೆ ಸಂಬಂಧಿಸಿದ ಈಗಾಗಲೇ ನಿಗದಿಪಡಿಸಿದ ವಿವಿಐಪಿ ಪಾರ್ಕಿಂಗ್, ವಿಐಪಿ ಪಾರ್ಕಿಂಗ್, ಕಾರು, ದ್ವಿಚಕ್ರ ವಾಹನ ಪಾರ್ಕಿಂಗ್ ಮಾಹಿತಿಗಳು ಫೋಟೋ ಸಮೇತ ಪಡೆಯಬಹುದು.
ನಗರದಲ್ಲಿ ಪರ್ಯಾಯ ಮೆರವಣಿಗೆ ಮಾರ್ಗ, ಪೊಲೀಸ್ ಔಟ್ ಪೋಸ್ಟ್, ಪೊಲೀಸ್ ಹೆಲ್ಪ್ ಲೈನ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೊಬೈಲ್ ಟಾಯ್ಲೆಟ್ ಗಳು, ಕಳ್ಳರ ಬಗ್ಗೆ ಎಚ್ಚರಿಕೆ ನೀಡುವ ಪೊಲೀಸ್ ನೋಟೀಸ್ ಅಳವಡಿಸಿರುವ ಸ್ಥಳಗಳು, ಬ್ಯಾರಿಕೇಡ್ ಅಳವಡಿಸಿರುವ ಸ್ಥಳ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವ್ಯವಸ್ಥೆಯಿಂದ ಪಡೆಯಬಹುದು.