ಢಾಕಾ: ಬಾಂಗ್ಲಾದೇಶದಲ್ಲಿ ಜನವರಿ 7 ರಂದು ನಡೆದ 12 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ-ಬಿಎನ್ಪಿ ಮತದಾನ ಬಹಿಷ್ಕಾರದ ನಡುವೆ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಅವಾಮಿ ಲೀಗ್ (AL) ಪಕ್ಷ ಗೆಲುವು ಸಾಧಿಸಿದೆ. ತನ್ಮೂಲಕ ಸತತ ನಾಲ್ಕನೇ ಬಾರಿಗೆ ಶೇಖ್ ಹಸೀನಾ ಪ್ರಧಾನಿ ಗದ್ದುಗೆ ಏರಲಿದ್ದಾರೆ.
ಭಾನುವಾರ ಮತದಾನ ಮುಕ್ತಾಯದ ಬಳಿಕ ನಡೆದ ಮತ ಎಣಿಕೆಯಲ್ಲಿ ಅವಾಮಿ ಲೀಗ್ ಆರಂಭಿಕ ಮುನ್ನಡೆ ಸಾಧಿಸಿದ್ದು, 224 ಸ್ಥಾನಗಳ ಪೈಕಿ 216 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ ಸ್ಥಾನಗಳ ಫಲಿತಾಂಶ ಘೋಷಣೆ ನಡೆದಿಲ್ಲ ಎಂದು ಬಾಂಗ್ಲಾ ಚುನಾವಣಾ ಆಯೋಗ ತಿಳಿಸಿದೆ. ಪ್ರಧಾನಿ ಹಸೀನಾ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ವಿರೋಧ ಪಕ್ಷ ಬಿಎನ್ಪಿ ಚುನಾವಣೆಯನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮತದಾನ ದಾಖಲಾಗಿದೆ.
ಶೇಖ್ ಹಸೀನಾ ಅವರು ಸತತ 4ನೇ ಬಾರಿ ಹಾಗೂ ಒಟ್ಟಾರೆಯಾಗಿ 5ನೇ ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ. ಶೇಖ್ ಹಸೀನಾ ಭಾರತ ಸರ್ಕಾರದ ಜೊತೆ ಸೌಹಾರ್ದಪೂರ್ಣ ಸಂಬಂಧ ಹೊಂದಿದ್ದು, ಎರಡೂ ದೇಶಗಳು ವ್ಯಾಪಾರ ವಹಿವಾಣು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಯೋಗ ಹೊಂದಿವೆ.